ಸ್ಮಿತ್​ ಗೈರಿನಲ್ಲಿ ರಾಜಸ್ಥಾನ ರಾಯಲ್ಸ್​ಗೆ ಉನಾದ್ಕತ್​ ಹಂಗಾಮಿ ನಾಯಕ?

jaidev
Published on

ಜೈಪುರ: ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ ಸರಣಿಯಿಂದಾಗಿ ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​ ಐಪಿಎಲ್​ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೌರಾಷ್ಟ್ರದ ವೇಗಿ ಜೈದೇವ್​ ಉನಾದ್ಕತ್​ ಐಪಿಎಲ್​ 13ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಸ್ಮಿತ್ ಅವರದಲ್ಲದೆ, ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​, ಜೋಫ್ರಾ ಆರ್ಚರ್​ ಮತ್ತು ಜೋಸ್​ ಬಟ್ಲರ್​ ಕೂಡ ಐಪಿಎಲ್​ ಟೂರ್ನಿಯ ಮೊದಲ ವಾರದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದರಿಂದಾಗಿ, ಈಗಾಗಲೆ ದೇಶೀಯ ಕ್ರಿಕೆಟ್​ನಲ್ಲಿ ಸೌರಾಷ್ಟ್ರ ತಂಡದ ನಾಯಕರಾಗಿ ರಣಜಿ ಟ್ರೋಫಿ ಗೆದ್ದುಕೊಟ್ಟಿರುವ 28 ವರ್ಷದ ಎಡಗೈ ವೇಗಿ ಜೈದೇವ್​ ಉನಾದ್ಕತ್​ ಅವರಿಗೆ ತಂಡದ ಹಂಗಾಮಿ ಸಾರಥ್ಯವನ್ನು ನೀಡಲು ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಚಿಂತನೆ ನಡೆಸಿದೆ.

ಜೈದೇವ್​ ಉನಾದ್ಕತ್​ 2018ರಲ್ಲಿ ಬರೋಬ್ಬರಿ 11.5 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಸೇರಿದ್ದರು. ಅವರು ಬೆನ್​ ಸ್ಟೋಕ್ಸ್​ (12.5 ಕೋಟಿ ರೂ.) ಬಳಿಕ ಅತ್ಯಂತ ದುಬಾರಿ ಆಟಗಾರ ಎನಿಸಿದ್ದರು. ಇಂಗ್ಲೆಂಡ್​-ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಟಿ20 ಸರಣಿ ಸೆಪ್ಟೆಂಬರ್​ 16ರವರೆಗೂ ನಡೆಯಲಿದೆ. ಐಪಿಎಲ್​ ಟೂರ್ನಿ ಸೆಪ್ಟೆಂಬರ್​ 19ರಂದು ಯುಎಇಯಲ್ಲಿ ಶುರುವಾಗಲಿದೆ. ಆದರೆ ಇಂಗ್ಲೆಂಡ್​ನಿಂದ ಯುಎಇಗೆ ಆಗಮಿಸಿದ ಬಳಿಕ ಆಟಗಾರರು ಕರೊನಾ ಪರೀಕ್ಷೆಗೆ ಒಳಪಡುವುದು ಅಗತ್ಯವಾಗಿರುವುದರಿಂದ, ಇದಕ್ಕೆ 7-10 ದಿನಗಳ ಕಾಲ ಬೇಕಾಗುತ್ತದೆ. ಹೀಗಾಗಿ ಟೂರ್ನಿಯ ಮೊದಲ 2-3 ಪಂದ್ಯಗಳಿಗೆ ಇಂಗ್ಲೆಂಡ್​, ಆಸೀಸ್​ ಆಟಗಾರರು ಅಲಭ್ಯರಾಗುವ ಭೀತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net