

ಬೆಂಗಳೂರು: ಪುರುಷರ ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್ ಹೇಗೋ, ಅದೇ ರೀತಿ ಮಹಿಳಾ ಕ್ರಿಕೆಟ್ನಲ್ಲಿ ಮಿಥಾಲಿ ರಾಜ್ ದೊಡ್ಡ ಹೆಸರು. ಸಚಿನ್ ಅವರಿಗಿಂತ ಬೇಗನೆ ಅಂದರೆ 14ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮಿಥಾಲಿ ರಾಜ್ 2 ದಶಕಗಳ ನಂತರವೂ ಕ್ರಿಕೆಟ್ಗೆ ವಿವಿಧ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಅವರು ಹಲವಾರು ತ್ಯಾಗಗಳನ್ನೂ ಮಾಡಿದ್ದಾರೆ. ಅದರಲ್ಲಿ ಚಾಕೊಲೇಟ್ ಕೂಡ ಒಂದಾಗಿದೆ ಎಂಬುದು ವಿಶೇಷ!
ಬಾಲ್ಯದಲ್ಲಿ ಎಲ್ಲರಂತೆ ನಾನು ಚಾಕೊಲೇಟ್ಗಳನ್ನು ಬಹಳಷ್ಟು ಇಷ್ಟಪಡುತ್ತಿದ್ದೆ. ಆದರೆ ಕ್ರಿಕೆಟ್ ವೃತ್ತಿಜೀವನಕ್ಕಾಗಿ ನಾನು ಅವುಗಳನ್ನು ತ್ಯಜಿಸಬೇಕಾಯಿತು ಎಂದು 37 ವರ್ಷದ ಮಿಥಾಲಿ ರಾಜ್ ಹೇಳಿಕೊಂಡಿದ್ದಾರೆ. ಭಾರತ ಪರ 209 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನು ಅವರು ಆಡಿದ್ದಾರೆ. 89 ಟಿ20 ಪಂದ್ಯಗಳನ್ನೂ ಆಡಿದ್ದು, ಈಗಾಗಲೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ನಿವೃತ್ತಿ ಪಡೆದಿದ್ದಾರೆ. ರಾಜಸ್ಥಾನದಲ್ಲಿ ಜನಿಸಿದರೂ, ಆಂಧ್ರಪ್ರದೇಶದಲ್ಲಿ ಬೆಳೆದ ಮಿಥಾಲಿ ರಾಜ್ ಭರತನಾಟ್ಯ ಕಲಾವಿದೆಯಾಗುವ ಹಂಬಲ ಹೊಂದಿದ್ದರು. ಆದರೆ ಅವರ ತಂದೆ ಕ್ರಿಕೆಟ್ ಆಟಗಾರ್ತಿಯಾಗುವಂತೆ ಪ್ರೇರೇಪಿಸಿದ್ದರು. ಪುಸ್ತಕಗಳನ್ನು ಓದುವುದು ಅವರ ನೆಚ್ಚಿನ ಹವ್ಯಾಸವಾಗಿದೆ.
ಮುಂದಿನ ವರ್ಷ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಿದ್ಧತೆಯಲ್ಲಿರುವ ಮಿಥಾಲಿ ರಾಜ್ ಪ್ರಶಸ್ತಿ ಗೆಲುವಿನೊಂದಿಗೆ ನಿವೃತ್ತಿ ಹೊಂದುವ ಹಂಬಲದಲ್ಲಿದ್ದಾರೆ. ಮಿಥಾಲಿ ರಾಜ್ ಅವರ ಜೀವನಾಧರಿತ 'ಶಭಾಷ್ ಮಿಥು' ಸಿನಿಮಾ ಈಗಾಗಲೆ ಚಿತ್ರೀಕರಣ ಆರಂಭಿಸಿದ್ದು, ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ.