

ಮುಂಬೈ: 17ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಟೂರ್ನಿ ಆರಂಭಕ್ಕೂ ಮುನ್ನ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಐದು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ತಂಡದ ಸಾರಥ್ಯವನ್ನು ವಹಿಸಿತ್ತು. ಫ್ರಾಂಚೈಸಿಯ ಈ ನಿರ್ಧಾರಕ್ಕೆ ಹಿಟ್ಮ್ಯಾನ್ ಅಭಿಮಾನಿಗಳು ಬಹಿರಂಗವಾಗಿ ಕಿಡಿಕಾರಿದ್ದರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನ್ಫಾಲೋ ಮಾಡಿದ್ದರು.
ಈ ವಿಚಾರ ಹಳೆಯದಾದರೂ ಇದರ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ ಎದುರಿರುವ ಸವಾಲುಗಳು ಮತ್ತು ರೋಹಿತ್ ಶರ್ಮಾ ಹಾರ್ದಿಕ್ ನಾಯಕತ್ವದಡಿ ಆಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಈ ಬಗ್ಗೆ ಮಾತನಾಡಿದ್ದು, ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಾರ್ಕ್ ಬೌಷರ್ ಹೇಳಿಕೆ, ರಿತಿಕಾ ಕಮೆಂಟ್ ಇವೆಲ್ಲವೂ ತಂಡದಲ್ಲಿ ಆಂತರಿಕ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ನಾನು ಮಾರ್ಕ್ ಬೌಷರ್ ಅವರ ಸಂದರ್ಶನವನ್ನು ನೋಡುತ್ತಿದ್ದೆ. ಅಲ್ಲಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಕೇಳಲಾಯಿತು. ಅದರ ಬಗ್ಗೆ ತಮ್ಮದೇ ಶೈಲಿಯಲ್ಲಿ ಬೌಷರ್ ಸ್ಪಷ್ಟನೆಯನ್ನು ನೀಡುತ್ತಾರೆ. ಆದರೆ, ಕ್ಷಣಾರ್ಧದಲ್ಲೇ ರಿತಿಕಾ ಮಾಡಿದ ಕಮೆಂಟ್ ಎಲ್ಲೆಡೆ ವೈರಲ್ ಆಯಿತು. ರೋಹಿತ್ ಪತ್ನಿ ಮಾಡಿರುವ ಕಮೆಂಟ್ ಆದರಿಂದ ಇದು ವೈರಲ್ ಆಗಬೇಕಿತ್ತು. ಆದರೆ, ಈ ಹೇಳಿಕೆ ಹಲವು ಆಸ್ಪದಗಳಿಗೆ ದಾರಿ ಮಾಡಿ ಕೊಡುವ ಸಾಧ್ಯತೆ ಇದೆ ಎಂದಿದ್ದಾರೆ.
ಆದರೆ, ಈಗ ಆತಂಕ ಪಡಲು ಕಾರಣವೇನೆಂದರೆ ಐಪಿಎಲ್ ಇತಿಹಾಸದಲ್ಲಿ ಉತ್ತಮ ರೆಕಾರ್ಡ್ ಹೊಂದಿರುವ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸಲು ಹಾರ್ದಿಕ್ ಪಾಂಡ್ಯ ಅವರ ಮುಂದೆ ದೊಡ್ಡ ಸವಾಲಿದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಒಟ್ಟಾಗಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದೆ ಈಗ ಪ್ರಶ್ನೆಯಾಗಿ ಕುಳಿತಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.