ಪ್ಲೇಆಫ್​ಗೇರಲು CSK ವಿರುದ್ಧ ನಡೆಯಬೇಕಿದೆ 18ರ ಪವಾಡ! ಇಷ್ಟರಲ್ಲಿ ಒಂದು ಉಲ್ಟಾ ಆದ್ರೂ RCB ಮನೆಗೆ

RCB (1)
Published on

ನವದೆಹಲಿ: ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲೇ ಸೋಲುಂಡಿತು. ಆದರೆ, ಚೇತರಿಸಿಕೊಂಡು ಎರಡನೇ ಪಂದ್ಯ ಗೆದ್ದು ಭರವಸೆ ಮೂಡಿಸಿತು. ಆದರೆ, ಡುಪ್ಲೆಸಿಸ್ ಪಡೆ ಸತತ 6 ಪಂದ್ಯಗಳಲ್ಲಿ ಸೋಲುವ ಮೂಲಕ ಒಂದು ಹಂತದಲ್ಲಿ ಟ್ರೋಫಿ ಗೆಲ್ಲುವ ಆಸೆಯನ್ನೇ ಕೈ ಚೆಲ್ಲಿತ್ತು. ಆದರೆ, ಪವಾಡವೆಂಬಂತೆ ಲೀಗ್‌ನ ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡ ಆರ್​ಸಿಬಿ ಸತತ 5 ಗೆಲುವಿನೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ. ಆದರೆ, ಪ್ಲೇ ಆಫ್​ಗೆ ಆರ್​ಸಿಬಿ ಅರ್ಹತೆ ಗಿಟ್ಟಿಸಿಕೊಳ್ಳಲು ಒಂದು ದೊಡ್ಡ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ. ಆ ಸವಾಲೇ ಚೆನ್ನೈ ಸೂಪರ್​ ಕಿಂಗ್ಸ್​.

ಮೇ 18ರಂದು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 68ನೇ ಪಂದ್ಯದಲ್ಲಿ ಆರ್​ಸಿಬಿ, ಸಿಎಸ್​ಕೆ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಕೇವಲ ಗೆದ್ದರೆ ಸಾಲದು, ದಾಖಲೆಯ ಗೆಲುವು ಬೇಕಿದೆ. ಇದಲ್ಲದೆ, ಉತ್ತಮ ಆಟದ ಜತೆಗೆ ಅದೃಷ್ಟವೂ ಕೈಹಿಡಿಯಬೇಕಿದೆ. ಏಕೆಂದರೆ, ಮಳೆಯಿಂದ ಪಂದ್ಯ ರದ್ದಾದರೆ ಆರ್​ಸಿಬಿ ಟೂರ್ನಿಯಿಂದ ಹೊರಬೀಳಲಿದೆ.

ಆರ್​ಸಿಬಿ ಪ್ಲೇಆಫ್​ಗಾಗಿ ಸಿಎಸ್​ಕೆ ವಿರುದ್ಧ ಏನು ಮಾಡಬೇಕೆಂದರೆ, ಮೊದಲು ಬ್ಯಾಟ್​ ಮಾಡಿದರೆ 18 ರನ್​ ಅಂತರದಲ್ಲಿ ಗೆಲ್ಲಬೇಕು ಅಥವಾ ಚೇಸಿಂಗ್​ ಮಾಡಿದರೆ 18.1 ಓವರ್​ಗಳಲ್ಲಿ ಟಾರ್ಗೆಟ್​ ತಲುಪಬೇಕು. ಉದಾಹರಣೆಗೆ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಇಳಿದು 200 ರನ್​ ಗಳಿಸಿದರೆ ಕನಿಷ್ಠ 18 ರನ್​ಗಳಿಂದಾದರೂ ಗೆಲ್ಲಬೇಕು. ಒಂದು ವೇಳೆ ಸಿಎಸ್​ಕೆ ಮೊದಲು ಬ್ಯಾಟಿಂಗ್​ಗೆ ಇಳಿದು 200 ರನ್​ ಪೇರಿಸಿದರೆ, ಆರ್​ಸಿಬಿ 18.1 ಓವರ್​ಗಳಲ್ಲಿ ಅಂದರೆ ಕನಿಷ್ಠ 11 ಎಸೆತ ಬಾಕಿ ಇರುವಂತೆಯೇ ಗೆಲ್ಲಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಆರ್​ಸಿಬಿ ಅಂಕಪಟ್ಟಿಯಲ್ಲಿ ಸಿಎಸ್​ಕೆಯನ್ನು ಹಿಂದಕ್ಕೆ ದೂಡಬಲ್ಲದು. ಈಗಾಗಲೇ 13 ಪಂದ್ಯಗಳನ್ನು ಆಡಿರುವ ಸಿಎಸ್​ಕೆ 7 ಗೆಲುವಿನೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಆರ್​ಸಿಬಿ 13 ಪಂದ್ಯಗಳಲ್ಲಿ 6 ಗೆಲುವುಗಳನ್ನು ಹೊಂದಿದೆ. ಸಿಎಸ್​ಕೆ 0.528 ನೆಟ್​ ರನ್​ ರೇಟ್​ ಹೊಂದಿದೆ, ಆದರೆ ಆರ್​ಸಿಬಿ 0.387 ನೆಟ್​ ರನ್​ ರೇಟ್​ ಇದೆ.

ಆರ್​ಸಿಬಿ ಪಾಲಿಗೆ ಈಗ 18 ಅದೃಷ್ಟದ ಸಂಖ್ಯೆ ಆಗಬೇಕಿದೆ! ಯಾಕೆಂದರೆ ಮೇ 18ರಂದು ಬೆಂಗಳೂರಿನಲ್ಲಿ ಸಿಎಸ್​ಕೆ ವಿರುದ್ಧ ನಡೆಯಲಿರುವ ಕಡೇ ಲೀಗ್​ ಪಂದ್ಯ ಆರ್​ಸಿಬಿ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ 18 ಜೆರ್ಸಿ ನಂಬರ್​ ಆಟಗಾರ ವಿರಾಟ್​ ಕೊಹ್ಲಿ ಸಿಡಿದರೆ ಮತ್ತು 18 ರನ್​ಗಳಿಂದ ಗೆದ್ದರೆ ಆರ್​ಸಿಬಿಗೆ ಪ್ಲೇಆಫ್​ ಅವಕಾಶ ಒಲಿಯಲಿದೆ.

ಪ್ಲೇಆಫ್ ರೇಸ್‌ನಲ್ಲಿ ಮತ್ತೊಂದು ಮಹತ್ವದ ಸ್ಪರ್ಧಿ ಅಂದರೆ ಅದು ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ. ಎಸ್‌ಆರ್‌ಎಚ್ ಐಪಿಎಲ್‌ನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿದೆ. ಉಳಿದ 2 ಪಂದ್ಯಗಳನ್ನು ಗೆದ್ದರೆ ಸುಲಭವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. ಆದಾಗ್ಯೂ, ಎಸ್​ಆರ್​ಎಚ್​ ಎರಡೂ ಪಂದ್ಯಗಳನ್ನು ಕಳೆದುಕೊಂಡರೆ ಆರ್​ಸಿಬಿ, ಸಿಎಸ್​ಕೆ ವಿರುದ್ಧ ಕಡಿಮೆ ಅಂತರದಲ್ಲಿ ಸೋತರೂ, ಪ್ಲೇಆಫ್​ಗೆ ಅರ್ಹತೆ ಪಡೆಯುವ ಅವಕಾಶ ಇರುತ್ತದೆ. ಆದರೆ, ಎಸ್​ಆರ್​ಎಚ್​ ಉಳಿದ ಎರಡರಲ್ಲಿ ಒಂದು ಪಂದ್ಯವನ್ನು ಗೆದ್ದರೆ, ಆರ್​ಸಿಬಿ ಪಾಲಿಗೆ ನೆಟ್​ ರನ್​ ರೇಟ್​ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಎಸ್​ಆರ್​ಎಚ್​ ಪ್ರಸ್ತುತ 0.406 ನೆಟ್​ ರನ್​ರೇಟ್​ ಹೊಂದಿದೆ.

ಲಖನೌ ಸೂಪರ್ ಜೈಂಟ್ಸ್ (LSG) ಗೆ ಎರಡು ಪಂದ್ಯಗಳು ಉಳಿದಿದ್ದು, ಎರಡನ್ನೂ ಗೆದ್ದರೆ ಅದು ಪ್ಲೇಆಫ್‌ಗೆ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿದೆ. ಆದಾಗ್ಯೂ ಎಸ್​ಆರ್​ಎಚ್​ ವಿರುದ್ಧ ಇತ್ತೀಚಿನ ಪಂದ್ಯದಲ್ಲಿ ಭಾರಿ ಅಂತರದಲ್ಲಿ ಸೋತ ನಂತರ LSG ಯ ನೆಟ್​ ರನ್​ ರೇಟ್​ ತುಂಬಾ ಕಡಿಮೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ (DC) ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಿದೆ. 13 ಪಂದ್ಯಗಳಲ್ಲಿ ಆರು ಗೆಲುವುಗಳನ್ನು ಹೊಂದಿದ್ದರೂ, ಇತರ ಪ್ಲೇಆಫ್ ಸ್ಪರ್ಧಿಗಳಿಗೆ ಹೋಲಿಸಿದರೆ ಡೆಲ್ಲಿ ಕ್ಯಾಪಿಟಲ್ಸ್​ ನೆಟ್​ ರನ್​ ರೇಟ್​ ಗಣನೀಯವಾಗಿ ಕಡಿಮೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net