ಭಾರತ ಹಾಕಿ ತಂಡದ ನಾಯಕ ಮನ್​ಪ್ರೀತ್​ ಸಿಂಗ್​ ಸೇರಿದಂತೆ ಐವರಿಗೆ ಕೋವಿಡ್​-19 ಪಾಸಿಟಿವ್​

HOCKEY PLAYERS FOR WEB
Published on

ನವದೆಹಲಿ: ಭಾರತ ಪುರುಷರ ಹಾಕಿ ತಂಡದ ನಾಯಕ ಮನ್​ಪ್ರೀತ್​ ಸಿಂಗ್​ ಸೇರಿದಂತೆ ಇತರ ನಾಲ್ವರಿಗೆ  ಕೋವಿಡ್​-19ರ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್​) ಆವರಣದಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ತರಬೇತಿ ಶಿಬಿರದ ಹಿನ್ನೆಲೆಯಲ್ಲಿ ಆಟಗಾರರಿಗೆ ಕೋವಿಡ್​-19 ಪರೀಕ್ಷೆ ನಡೆಸಲಾಗಿತ್ತು. ಮನ್​ಪ್ರೀತ್​ ಸಿಂಗ್​ ಅಲ್ಲದೆ, ಡಿಫೆಂಡರ್​ ಸುರೇಂದರ್​ ಕುಮಾರ್​, ಜಸ್ಕರಣ್​ ಸಿಂಗ್​, ಡ್ರ್ಯಾಗ್ ಫ್ಲಿಕರ್​ ವರುಣ್​ ಕುಮಾರ್​ ಕೋವಿಡ್​ ಹಾಗೂ ಗೋಲ್ ಕೀಪರ್ ಕೃಷ್ಣನ್ ಬಹದೂರ್ ಪಾಠಕ್ ವರದಿ ಪಾಸಿಟಿವ್​ ಬಂದಿದೆ. ಆಗಸ್ಟ್​ 4 ರಿಂದ ಸೆಪ್ಟೆಂಬರ್​ 19 ರವರೆಗೆ ಸಾಯ್​ ಕೇಂದ್ರದಲ್ಲಿ ಟೋಕಿಯೊ ಒಲಿಂಪಿಕ್ಸ್​ ಹಿನ್ನೆಲೆಯಲ್ಲಿ ರಾಷ್ಟ್ರೀಯ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಶಿಬಿರ ಆರಂಭಕ್ಕೂ ಮುನ್ನ ಎಲ್ಲ ಆಟಗಾರರನ್ನು ಕೋವಿಡ್​-19ರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಾಸಿಟಿವ್​ ಕಾಣಿಸಿಕೊಂಡಿರುವ ಆಟಗಾರರನ್ನು ಕ್ಯಾಂಪಸ್​ನಲ್ಲೆ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಸಾಯ್​ ಕ್ಯಾಂಪಸ್​ನಲ್ಲೇ ಸ್ವಯಂ ಕ್ವಾರಂಟೈನ್ ಗೆ ಒಳಗಾಗಲಿದ್ದೇನೆ, ಇಂಥ ಪರಿಸ್ಥಿತಿಯನ್ನು ನಿಭಾಯಿಸಿದ ಸಾಯ್​ ಪ್ರಾಧಿಕಾರಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದು, ಬೇಗ ಹುಷಾರಾಗಲಿದ್ದೇನೆ ಎಂದು ಮನ್​ಪ್ರೀತ್​ ಸಿಂಗ್​ ಸಾಯ್​ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್​ 19 ರಿಂದ ಜುಲೈ 19ರವರೆಗೆ ವಿಶ್ರಾಂತಿ ಬಳಿಕ ಆಟಗಾರರು ಸಾಯ್​ ಕೇಂದ್ರಕ್ಕೆ ವಾಪಸಾಗಿದ್ದರು. ಇದಕ್ಕೂ ಮೊದಲು ದಿಢೀರ್​ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಸಾಯ್​ ಕೇಂದ್ರದಲ್ಲೇ 2 ತಿಂಗಳ ಕಾಲ ಲಾಕ್​ಆಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net