

ಬೆಂಗಳೂರು: ಕರೊನಾ ವೈರಸ್ ಮಹಾಮಾರಿ ಪ್ರಸಕ್ತ ವರ್ಷದ ಜಾಗತಿಕ ಕ್ರೀಡಾಲೋಕದ ವೇಳಾಪಟ್ಟಿಯನ್ನೇ ಅಸ್ತವ್ಯಸ್ಥಗೊಳಿಸಿದೆ. ಕ್ರೀಡೆಗಳಿಗೆ ಚಾಲನೆ ನೀಡಿದರೂ ಪ್ರೇಕ್ಷಕರು ಇಲ್ಲದೆ ನಡೆಯುತ್ತಿವೆ. 2020 ಇದುವರೆಗೂ ಕ್ರೀಡಾ ಕ್ಷೇತ್ರಕ್ಕೆ ಪೂರಕವಾಗಿಲ್ಲ. ಈ ಮಹಾಮಾರಿ ನಡುವೆಯೂ ಭಾರತ ಪುರುಷರ ಹಾಕಿ ತಂಡದ ಮಾಜಿ ಕೋಚ್ ಮೈಕಲ್ ನೊಬ್ಸ್ ಕ್ಯಾನ್ಸರ್ನಿಂದ ಚೇತರಿಕೆ ಕಂಡಿದ್ದಾರೆ. ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ 66 ವರ್ಷದ ನೊಬ್ಸ್, ಕಳೆದ ಮಾರ್ಚ್ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ನೊಬ್ಸ್ 1984ರ ಒಲಿಂಪಿಕ್ಸ್ನಲ್ಲಿ ಆಸ್ಟ್ರೆಲಿಯಾ ಹಾಕಿ ತಂಡದ ಭಾಗವಾಗಿದ್ದರು. 2011 ರಿಂದ 2013ರವರೆಗೆ ಭಾರತ ತಂಡದ ಕೋಚ್ ಆಗಿದ್ದ ಅವರು, 2012ರಲ್ಲಿ ಭಾರತ ತಂಡ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್ಗೆ ಭಾರತ ಅರ್ಹತೆ ಪಡೆಯಲು ವಿಲವಾಗಿತ್ತು. ತಮ್ಮ ಇಬ್ಬರು ಮಕ್ಕಳಾದ ಕೈಟ್ಲಿನ್ ಹಾಗೂ ಜೈಮೀಗೆ ನೊಬ್ಸ್ ಅವರೇ ಕೋಚ್ ಆಗಿದ್ದರು. ಕೈಟ್ಲಿನ್ ಆಸ್ಟ್ರೆಲಿಯಾ ಮಹಿಳಾ ಹಾಕಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಮಗಳು ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯಲ್ಲಿದ್ದಳು, ಈ ವೇಳೆ ಮಾರ್ಚ್ ತಿಂಗಳಲ್ಲಿ ನನಗೆ ಶ್ವಾಸಕೋಶದಲ್ಲಿ ಸಮಸ್ಯೆ ಕಂಡು ಬಂತು. ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದಾಗ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತಕ್ಷಣವೇ ಶಸ್ತ್ರ ಚಿಕಿತ್ಸೆಗೆ ಒಳಗಾದೆ ಎಂದು ನೊಬ್ಸ್ ಹೇಳಿದ್ದಾರೆ.
ಇದನ್ನೂ ಓದಿ: ಸಯೀದ್ ಅನ್ವರ್ ಸಾಧನೆ ಸರಿಗಟ್ಟಿದ ಶಾನ್ ಮಸೂದ್
ನಾನು ಧೂಮಪಾನ ಮಾಡುವುದಿಲ್ಲ. ಯಾವುದೇ ದುಶ್ಚಟಗಳಿಲ್ಲ. ಆದರೂ ನನಗೇಕೆ ಬಂತು ಎಂದು ಹಲವು ಬಾರಿ ಯೋಚಿಸಿದೆ. ಎಷ್ಟೋ ಭಾರಿ ಒಬ್ಬನೇ ಅಳುತ್ತಾ ಕುಳಿತಿರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ನನ್ನ ಮಕ್ಕಳಿಗೆ, ಸ್ನೇಹಿತರಿಗೆ ಈ ವಿಷಯ ಹೇಗೆ ಹೇಳುವುದು ಎಂದು ಯೋಚಿಸುತ್ತಿದ್ದೆ. ಶಸ್ತ್ರಚಿಕಿತ್ಸೆ ಬಳಿಕ ನನ್ನ ಜೀವದ ಮೇಲೆ ಭರವಸೆ ಮೂಡಿಸಿತು ಎಂದು ಮೈಕಲ್ ನೊಬ್ಸ್ ಹೇಳಿದ್ದಾರೆ. ಕಠಿಣ ಸ್ಥಿತಿಯಲ್ಲಿ ನನಗೆ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.