

ನವದೆಹಲಿ : ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಕಿ ತಂಡ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ದೇಶದ ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಹೆಸರಿಡುವ ನಿರ್ಧಾರ ಕೈಗೊಳ್ಳಲಾಗಿದೆ. ಈವರೆಗೆ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಎಂಬ ಹೆಸರಿದ್ದ ಈ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಅವಾರ್ಡ್ ಎಂದು ಮರುನಾಮಕರಣ ಮಾಡಲಾಗಿದೆ.
ಈ ನಿರ್ಧಾರವನ್ನು ಟ್ವಿಟರ್ ಮೂಲಕ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದು, "ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಹೆಸರಲ್ಲಿ ಮರುನಾಮಕರಣ ಮಾಡಬೇಕೆಂದು ನನಗೆ ದೇಶದಾದ್ಯಂತದಿಂದ ಹಲವು ಮನವಿಗಳು ಬರುತ್ತಿದ್ದವು. ಅವರ ಅಭಿಪ್ರಾಯಕ್ಕೆ ಧನ್ಯವಾದ. ಅವರ ಭಾವನೆಯನ್ನು ಗೌರವಿಸುತ್ತಾ, ಇನ್ನು ಮುಂದಕ್ಕೆ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುವುದು" ಎಂದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, "ಮೇಜರ್ ಧ್ಯಾನ್ ಚಂದ್ ಅವರು ಭಾರತಕ್ಕೆ ಹೆಮ್ಮೆ ಮತ್ತು ಗೌರವ ತಂದ ಮುಂಚೂಣಿ ಕ್ರೀಡಾಪಟುಗಳಲ್ಲಿ ಒಬ್ಬರು. ದೇಶದ ಅತ್ಯುನ್ನತ ಕ್ರೀಡಾ ಗೌರವವನ್ನು ಅವರ ಮೇಲೆ ಹೆಸರಿಸುವುದು ಸೂಕ್ತ ಕಾರ್ಯವಾಗಿದೆ" ಎಂದು ಮೋದಿ ಬರೆದಿದ್ದಾರೆ.
ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕುರ್, ಈ ನಿರ್ಧಾರವನ್ನು ಸ್ವಾಗತಿಸಿದ್ದು, ಧ್ಯಾನ್ ಚಂದ್ ಅವರ ಬದುಕು ಮತ್ತು ಸಾಧನೆಗಳು ಭಾರತಕ್ಕೆ ಕೀರ್ತಿ ತಂದಿರುವ ಹಲವು ಪೀಳಿಗೆಗಳ ಕ್ರೀಡಾಳುಗಳನ್ನು ಪ್ರೇರೇಪಿಸುತ್ತಾ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈವರೆಗೂ ಕ್ರೀಡಾ ಕ್ಷೇತ್ರದ ಹಲವರು ಧ್ಯಾನ್ ಚಂದ್ ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಧ್ಯಾನ್ ಚಂದ್ ಅವರ ಉತ್ತಮ ಆಟಗಾರಿಕೆಯಿಂದಾಗಿಯೇ ಭಾರತ ಒಂದು ಕಾಲದಲ್ಲಿ ದಾಖಲೆ ಎಂಟು ಚಿನ್ನದ ಪದಕಗಳನ್ನು ಗೆದ್ದಿತ್ತು. (ಏಜೆನ್ಸೀಸ್)