ಸಾಧನೆಯ ಪಥದಲ್ಲಿ ನೆರವಾದ ಟ್ರಕ್​ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು

chanutr
Published on

ಇಂಫಾಲ್ : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ತಮ್ಮ ಹಳ್ಳಿಯಿಂದ ಇಂಫಾಲ್​​ನಲ್ಲಿದ್ದ ಕ್ರೀಡಾ ತರಬೇತಿ ಕೇಂದ್ರಕ್ಕೆ ತಲುಪಲು ಪ್ರತಿನಿತ್ಯ 25 ಕಿಲೋಮೀಟರ್​ ಪ್ರಯಾಣಿಸಬೇಕಿತ್ತು. ಆ ಸಮಯದಲ್ಲಿ ಅವರಿಗೆ ಲಿಫ್ಟ್​ ಕೊಟ್ಟು ಸಹಾಯ ಮಾಡಿದ್ದವರು ನಿತ್ಯ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟ್ರಕ್​ ಚಾಲಕರು. ಅವರಿಗೆ ಕೃತಜ್ಞತೆ ಅರ್ಪಿಸಲು ನಿನ್ನೆಯ ದಿನ ಮಣಿಪುರದ ತಮ್ಮ ನಿವಾಸದ ಬಳಿ 150 ಟ್ರಕ್​ ಚಾಲಕರನ್ನು ಚಾನು ಸನ್ಮಾನಿಸಿದ್ದಾರೆ.

ಪ್ರತಿನಿತ್ಯ ಅಷ್ಟು ದೂರದ ಪ್ರಯಾಣ ನಡೆಸಲು ಆರ್ಥಿಕ ಅನುಕೂಲ ಇಲ್ಲದ ಚಾನುಗೆ ಹಲವು ವರ್ಷಗಳು ಮರಳು ಸಾಗಣೆ ಟ್ರಕ್ ಚಾಲಕರು ಬೆಂಬಲವಾಗಿದ್ದರು ಎಂದು ತಿಳಿಸಿದ್ದಾರೆ. ತಮ್ಮ ಸಾಧನೆಯಲ್ಲಿ ಅವರದ್ದು ದೊಡ್ಡ ಪಾತ್ರವಿದೆ ಎಂದಿರುವ ಚಾನು, ಗುರುವಾರ ಟ್ರಕ್​ ಚಾಲಕರನ್ನು ಭೇಟಿ ಮಾಡಿದಾಗ ಭಾವುಕರಾಗಿ ಧನ್ಯವಾದ ಹೇಳಿದರು ಎಂದು ಎನ್​ಡಿಟಿವಿ ವರದಿ ಮಾಡಿದೆ.

ಸ್ಟಾರ್​ ವೇಯ್ಟ್​ಲಿಫ್ಟರ್​ ಮೀರಾಬಾಯಿ ಚಾನು ಅವರು ಮಣಿಪುರದ ಪಾರಂಪರಿಕ ಪೋಷಾಕು ತೊಟ್ಟು, ಟ್ರಕ್​ ಚಾಲಕರನ್ನು ಕುರ್ಚಿಗಳ ಮೇಲೆ ಕೂರಿಸಿ, ಪ್ರತಿಯೊಬ್ಬರಿಗೂ ಒಂದು ಶರ್ಟ್ ಮತ್ತು ಮಣಿಪುರಿ ಶಾಲು ನೀಡಿ ಸತ್ಕರಿಸಿದ್ದಾರೆ. ಜೊತೆಗೆ ಮಣಿಪುರಿ ಶೈಲಿಯ ಮೃಷ್ಟಾನ್ನ ಭೋಜನ ಹಾಕಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net