

ನವದೆಹಲಿ : "ಐತಿಹಾಸಿಕ! ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಕೆತ್ತಲಾಗುವ ದಿನವಿದು" - ಇದು ಒಲಿಂಪಿಕ್ಸ್ ಹಾಕಿ ಪಂದ್ಯದಲ್ಲಿ ಕಂಚು ಗೆದ್ದ ಭಾರತ ತಂಡದ ರೋಮಾಂಚಕ ಸಾಧನೆಯ ಬಗೆಗೆ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ ಮೊದಲ ಪ್ರತಿಕ್ರಿಯೆ.
ಇಂದು ಬೆಳ್ಳಂಬೆಳಗ್ಗೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಜರ್ಮನಿಯ ವಿರುದ್ಧ ಭಾರೀ ಹಣಾಹಣಿಯ ಪಂದ್ಯವನ್ನು 5-4 ಸ್ಕೋರ್ನೊಂದಿಗೆ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಟ್ವೀಟ್ ಮಾಡಿ, ಭಾವನಾತ್ಮಕ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನಿವಾಸದ ಅಧಿಕಾರಿಗಳ ಪ್ರಕಾರ, ಇಂದಿನ ಒಲಿಂಪಿಕ್ಸ್ ಹಾಕಿ ಪಂದ್ಯವನ್ನು ನೋಡುವುದಕ್ಕಾಗಿ ಮೋದಿ ಅವರು ತಮ್ಮ ಬೆಳಗಿನ ಯೋಗ ಅಭ್ಯಾಸವನ್ನು ಬಿಟ್ಟು ಕೂತಿದ್ದರಂತೆ!
"ದೇಶಕ್ಕೆ ಕಂಚಿನ ಪದಕ ತಂದ ಪುರುಷರ ಹಾಕಿ ತಂಡದ ಈ ಸಾಧನೆಯಿಂದ ಅವರು ಇಡೀ ದೇಶದ, ವಿಶೇಷವಾಗಿ ಯುವಜನರ, ಗಮನ ಸೆಳೆದಿದ್ದಾರೆ. ಭಾರತ ನಮ್ಮ ಹಾಕಿ ತಂಡದ ಬಗ್ಗೆ ಹೆಮ್ಮೆ ಹೊಂದಿದೆ" ಎಂದು ಇಂಗ್ಲೀಷಿನಲ್ಲಿ ಟ್ವೀಟ್ ಮಾಡಿರುವ ಮೋದಿ, "ಪ್ರಫುಲ್ಲಿತ್ ಭಾರತ್! ಪ್ರೇರಿತ್ ಭಾರತ್! ಗರ್ವಿತ ಭಾರತ್!" ಎಂದು ಹಿಂದಿಯಲ್ಲಿ ಹರ್ಷೋದ್ಗಾರ ಮಾಡಿದ್ದಾರೆ.
ಮುಂದುವರೆದು, "ಟೋಕಿಯೋದಲ್ಲಿ ಹಾಕಿ ತಂಡದ ವೈಭವಯುತ ಗೆಲುವು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ಹೊಸ ಭಾರತ, ಆತ್ಮವಿಶ್ವಾಸದಿಂದ ಕೂಡಿದ ಭಾರತವಾಗಿದೆ" ಎಂದು ಭಾರತದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜೊತೆಗೆ, ಭಾರತ ತಂಡದ ಕ್ಯಾಪ್ಟನ್ ಮನ್ಪ್ರೀತ್ ಸಿಂಗ್, ಕೋಚ್ ಗ್ರಾಹಂ ರೈಡ್ ಮತ್ತು ಸಹಾಯಕ ಕೋಚ್ ಪಿಯೂಶ್ ದುಬೆ ಅವರಿಗೆ ದೂರವಾಣಿ ಕರೆ ಮಾಡಿ, "ನಿಮ್ಮ ಶ್ರಮ ಫಲ ತಂದಿದೆ" ಎಂದು ಮೋದಿ ಅಭಿನಂದಿಸಿದ್ದಾರೆ. ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಕ್ಷಣಗಳ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವಿಟರ್ನಲ್ಲಿ ಶೇರ್ ಮಾಡಿದೆ.
ಕ್ರೀಡಾ ಸಚಿವ ಅನುರಾಗ್ ಠಾಕುರ್ ಅವರು, "ಎ ಬಿಲಿಯನ್ ಚೀರ್ಸ್ ಫಾರ್ ಇಂಡಿಯಾ! ಬಾಯ್ಸ್ ಯು ಹಾವ್ ಡನ್ ಇಟ್!" ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದು, "ಇದು ಮಹತ್ವದ ಕ್ಷಣ. ಇಡೀ ದೇಶ ನಿಮ್ಮ ಬಗ್ಗೆ ಹೆಮ್ಮೆ ಹೊಂದಿದೆ" ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)