More

    ಮಾಸ್​ ಸಿಕ್​ ಲೀವ್​ ಪಡೆದ 25 ಕ್ಯಾಬಿನ್​ ಸಿಬ್ಬಂದಿಗೆ ಏರ್​ ಇಂಡಿಯಾ ಶಾಕ್​! ಕೆಲಸದಿಂದಲೇ ವಜಾ

    ನವದೆಹಲಿ: ಮೊದಲೇ ಮಾಹಿತಿ ನೀಡದೆ ದಿಢೀರನೇ ಸಾಮೂಹಿಕ ಅನಾರೋಗ್ಯ ರಜೆ ತೆಗೆದುಕೊಳ್ಳುವ ಮೂಲಕ ಬಿಕ್ಕಟ್ಟು ಸೃಷ್ಟಿ ಮಾಡಿದ 25 ಕ್ಯಾಬಿನ್​ ಸಿಬ್ಬಂದಿಯನ್ನು ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಕೆಲಸದಿಂದ ವಜಾಗೊಳಿಸಿದೆ.

    ಅನಾರೋಗ್ಯ ರಜೆ ಪಡೆದ ಸಿಬ್ಬಂದಿಗೆ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಯು ಬುಧವಾರ ಟರ್ಮಿನೇಟ್​ ಪತ್ರಗಳನ್ನು ನೀಡಲು ಪ್ರಾರಂಭಿಸಿದ್ದು, ವರದಿಗಳ ಪ್ರಕಾರ, ಸುಮಾರು 25 ಉದ್ಯೋಗಿಗಳನ್ನು ವಜಾಗೊಳಿಸಿದೆ. ನಿನ್ನೆ (ಮೇ 08) ಏರ್​ ಇಂಡಿಯಾ ಎಕ್ಸ್​ಪ್ರೆಸ್​ನ ಸುಮಾರು 300 ಹಿರಿಯ ಕ್ಯಾಬಿನ್ ಸಿಬ್ಬಂದಿ ಕೊನೆಯ ಗಳಿಗೆಯಲ್ಲಿ ಅನಾರೋಗ್ಯ ರಜೆ ತೆಗೆದುಕೊಂಡು ತಮ್ಮ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದರಿಂದ 79 ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟವನ್ನು ಏರ್​ ಇಂಡಿಯಾ ರದ್ದುಗೊಳಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

    ಈ ಬಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಇಒ ಅಲೋಕ್ ಸಿಂಗ್ ಮಾತನಾಡಿ, ಕ್ಯಾಬಿನ್ ಸಿಬ್ಬಂದಿಯ ಅನಾರೋಗ್ಯ ರಜೆಯ ಪರಿಣಾಮವಾಗಿ 90 ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ವಿಳಂಬ ಮತ್ತು ರದ್ದತಿಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ವಿಮಾನಯಾನವನ್ನು ಕಡಿತಗೊಳಿಸುವುದಾಗಿ ಬುಧವಾರ ಹೇಳಿದ್ದಾರೆ.

    ಪ್ರತಿದಿನ 250ಕ್ಕೂ ಹೆಚ್ಚು ದೇಶೀಯ ಮತ್ತು 120 ಅಂತಾರಾಷ್ಟ್ರೀಯ ವಿಮಾನಗಳು ಸೇರಿ 350 ರಿಂದ 400 ವಿಮಾನಗಳನ್ನು ನಡೆಸುತ್ತಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಮೇ 13 ರವರೆಗೆ ತನ್ನ ದೈನಂದಿನ ವಿಮಾನ ವೇಳಾಪಟ್ಟಿಯನ್ನು ಸುಮಾರು 40ರಷ್ಟು ಕಡಿಮೆ ಮಾಡಲಿದೆ. ಮಂಗಳವಾರ (ಮೇ 7) ಮಧ್ಯರಾತ್ರಿಯಿಂದ, ಸಿಬ್ಬಂದಿ ಸಮಸ್ಯೆಗಳಿಂದಾಗಿ ಟಾಟಾ ಸಮೂಹದ ಏರ್‌ಲೈನ್ಸ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ವಹಿಸುವ ಸುಮಾರು 80 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

    ಟಾಟಾ ಗ್ರೂಪ್ ಒಡೆತನದ ಏರ್‌ಲೈನ್‌ನಲ್ಲಿ ಹೊಸ ಉದ್ಯೋಗ ಅವಧಿಯ ವಿರುದ್ಧ ಸಿಬ್ಬಂದಿ ಪ್ರತಿಭಟಿಸುತ್ತಿರುವುದಾಗಿ ತಿಳಿದುಬಂದಿದೆ. ನಿನ್ನೆ ಹಲವಾರು ಪ್ರಯಾಣಿಕರು ತಮ್ಮ ಸಾಮಾಜಿಕ ಜಾಲತಾಣ ವೇದಿಕೆ ಮೂಲಕ ವಿಮಾನಗಳ ಹಠಾತ್ ರದ್ದತಿಯ ಬಗ್ಗೆ ದೂರು ನೀಡಿದರು. ರದ್ದತಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ತುಂಬಾ ಬೇಸರವಾಯಿತು ಎಂದು ಪ್ರಯಾಣಿಕರೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದರ ನಡುವೆ ಏರ್​ ಇಂಡಿಯಾ ಕೂಡ ಕ್ಷಮೆಯಾಚಿಸಿತು.

    ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳ ಬಳಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಪ್ರಸ್ತುತ ಪರಿಸ್ಥಿತಿಯು ನಾವು ಒದಗಿಸುವ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಒತ್ತಿಹೇಳುತ್ತೇವೆ. ವಿಮಾನ ಪ್ರಯಾಣದ ದಿಢೀರ್​ ರದ್ದತಿಯಿಂದ ಸಮಸ್ಯೆಗೊಳಗಾದ ಅತಿಥಿಗಳಿಗೆ ಅಥವಾ ಪ್ರಯಾಣಿಕರಿಗೆ ಪೂರ್ಣ ಹಣ ಮರುಪಾವತಿ ಅಥವಾ ಪ್ರಯಾಣಕ್ಕೆ ಬದಲಿ ದಿನಾಂಕವನ್ನು ನೀಡಲಾಗುವುದು ಎಂದು ಏರ್‌ಲೈನ್ಸ್ ತಿಳಿಸಿದೆ. (ಏಜೆನ್ಸೀಸ್​)

    ಮಾಸ್​ ಸಿಕ್​ ಲೀವ್​ ಪಡೆದು ಮೊಬೈಲ್​ ಸ್ವಿಚ್​ ಆಫ್​! ಏರ್​ ಇಂಡಿಯಾದ 70ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts