

2010ರಲ್ಲಿ ಅಸ್ತಿತ್ವಕ್ಕೆ ಬಂದ ಕೇರಳ ಟಸ್ಕರ್ಸ್ ಫ್ರಾಂಚೈಸಿ ಆ ವರ್ಷ ಐಪಿಎಲ್ ಆಡಿತು. ಇದಾದ ಒಂದು ವರ್ಷದಲ್ಲಿ ಬಿಸಿಸಿಐ ಅವರ ಒಪ್ಪಂದವನ್ನು ರದ್ದುಗೊಳಿಸಿತು. ಅದಕ್ಕೆ ಕಾರಣ ಐಪಿಎಲ್ ಫ್ರಾಂಚೈಸಿ ನಿಯಮವನ್ನು ಉಲ್ಲಂಘಿಸಿದ್ದು. ಆ ನಿಯಮ ಏನೆಂದರೆ, ಫ್ರ್ಯಾಂಚೈಸಿ ಶುಲ್ಕದ ಶೇ. 10 ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಪಾವತಿಸಬೇಕಿತ್ತು. ಅಂದರೆ, 153 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಯನ್ನು ನೀಡಬೇಕಿತ್ತು. ಆರು ತಿಂಗಳೊಳಗೆ ಹೊಸ ಗ್ಯಾರಂಟಿ ನೀಡುವಂತೆ ಕೇಳಿತು. ಆದರೆ, ಫ್ರಾಂಚೈಸಿ ವಿಫಲವಾಯಿತು.
ಕ್ರೀಡಾಂಗಣದ ಲಭ್ಯತೆ, ಷೇರುದಾರರ ಸಮಸ್ಯೆಗಳು ಮತ್ತು ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು ಹಠಾತ್ತನೆ ಕಡಿಮೆ ಮಾಡುವ ಸಮಸ್ಯೆಗಳನ್ನು ಉಲ್ಲೇಖಿಸಿ ಟಸ್ಕರ್ಸ್ ಆ ಸಮಯದಲ್ಲಿ ಬ್ಯಾಂಕ್ ಗ್ಯಾರಂಟಿ ನೀಡಲಿಲ್ಲ. ಹೀಗಾಗಿ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಯನ್ನು ಕೈಬಿಟ್ಟಿತು.
ಈ ನಿರ್ಧಾರದಿಂದ ಅಸಮಾಧಾನಗೊಂಡ ಕೊಚ್ಚಿ ಟಸ್ಕರ್ಸ್ ಮಾಲೀಕರಾದ ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ 2012 ರಲ್ಲಿ ವ್ಯಾಜ್ಯ ಪರಿಹಾರ ನ್ಯಾಯಾಲಯದಲ್ಲಿ ದೂರು ದಾಖಲಿಸಿತು. 2015ರ ಜುಲೈ ತಿಂಗಳಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್.ಪಿ. ಲಹೋಟಿ ನೇತೃತ್ವದ ಸಮಿತಿಯು ಬಿಸಿಸಿಐಗೆ 384 ಕೋಟಿ ರೂ.ಗಳ ದಂಡವನ್ನು ಪಾವತಿಸಲು ಮತ್ತು ಕೊಚ್ಚಿ ಟಸ್ಕರ್ಸ್ ನೀಡಿದ 153 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಯನ್ನು ಹಿಂದಿರುಗಿಸಲು ಆದೇಶಿಸಿತು. ಆದರೆ, ಬಿಸಿಸಿಐನಲ್ಲಿನ ಒಂದು ಪ್ರಬಲ ಬಣವೂ ಇದಕ್ಕೆ ಸಿದ್ಧರಿರಲಿಲ್ಲ. ಬಳಿಕ ಬಿಸಿಸಿಐ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ಬಾಂಬೆ ಹೈಕೋರ್ಟ್ ಕೂಡ ಬಿಸಿಸಿಐಗೆ ಶಾಕ್ ನೀಡಿದೆ. ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿ ಪರವಾಗಿ ತೀರ್ಪು ನೀಡಿದೆ. ಕೂಡಲೇ ಬಿಸಿಸಿಐ 538 ಕೋಟಿ ರೂ.ಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ. ಈ ತೀರ್ಪು ಭಾರತೀಯ ಕ್ರಿಕೆಟ್ ಅಧಿಕಾರಿಗಳಿಗೆ ದೊಡ್ಡ ಹಿನ್ನಡೆಯಾಗಿದೆ.
ಇನ್ನು ಕೊಚ್ಚಿ ಟಸ್ಕರ್ಸ್ ಜೊತೆಗೆ, ಬಿಸಿಸಿಐ ಸಹಾರಾ ಗ್ರೂಪ್ ಒಡೆತನದ ಪುಣೆ ವಾರಿಯರ್ಸ್ ಅನ್ನು ಸಹ ನಿಷೇಧಿಸಿತ್ತು. ಈ ತಂಡವು 2014 ರ ಹೊತ್ತಿಗೆ ಅಸ್ತಿತ್ವದಲ್ಲಿಲ್ಲ.
2010ರಲ್ಲಿ ಐಪಿಎಲ್ ರಚನೆಯಾದ ಸಮಯದಲ್ಲಿ, ಆಗಿನ ಐಪಿಎಲ್ ಆಯುಕ್ತ ಲಲಿತ್ ಮೋದಿ ಕೊಚ್ಚಿ ಟಸ್ಕರ್ಸ್ ತಂಡವನ್ನು ಸ್ವೀಕರಿಸಲು ಮತ್ತು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧರಿರಲಿಲ್ಲ. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಹಸ್ತಕ್ಷೇಪದಿಂದ ತಂಡಕ್ಕೆ ಸಹಿ ಹಾಕಲಾಯಿತು. ಮೊದಲ ಋತುವಿನಲ್ಲಿ ತಂಡವು ಎಂಟನೇ ಸ್ಥಾನವನ್ನು ಮಾತ್ರ ತಲುಪಲು ಸಾಧ್ಯವಾಯಿತು. ಆ ಸಮಯದಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಾದ ಗ್ರೇಮ್ ಸ್ಮಿತ್, ಮಿಚೆಲ್ ಮಾರ್ಷ್, ಜೆರೋಮ್ ಟೇಲರ್, ಯುವರಾಜ್ ಸಿಂಗ್, ಏಂಜೆಲೊ ಮ್ಯಾಥ್ಯೂಸ್, ಆಶಿಶ್ ನೆಹ್ರಾ, ಮುತ್ತಯ್ಯ ಮುರಳೀಧರನ್ ಮತ್ತು ಬ್ರೆಂಡನ್ ಮೆಕಲಮ್ ಎಲ್ಲರೂ ಕೊಚ್ಚಿ ಟಸ್ಕರ್ಸ್ ತಂಡದ ಭಾಗವಾಗಿದ್ದರು. ಇಂದಿನ ತೀರ್ಪಿನೊಂದಿಗೆ, ಪ್ರತಿಯೊಬ್ಬ ಐಪಿಎಲ್ ಅಭಿಮಾನಿಯೂ ಫ್ರಾಂಚೈಸಿ ಹೆಚ್ಚಿನ ಶಕ್ತಿಯೊಂದಿಗೆ ಮರಳುತ್ತದೆಯೇ ಎಂದು ಕಾತರದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್)