ಐ ಲವ್​ ಪಾಕಿಸ್ತಾನ, ಯುದ್ಧ ನಿಲ್ಲಿಸಿದ್ದು ನಾನೇ... ಭಾರತೀಯರನ್ನು ಕೆರಳಿಸಿದ ಟ್ರಂಪ್ ಹೇಳಿಕೆ! Donald Trump

Donald Trump
Published on

Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದೊಂದಿಗಿನ ಕದನ ವಿರಾಮದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಿಲ್ಲ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಟ್ರಂಪ್​ ಮತ್ತೊಮ್ಮೆ ವಾದ ಮಂಡಿಸಿದ್ದಾರೆ. ಅಲ್ಲದೆ, ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ ಅಂತಾನೂ ಹೇಳಿದ್ದಾರೆ. ಮೋದಿ ಒಬ್ಬ ಮಹಾನ್ ವ್ಯಕ್ತಿ ಎಂದು ಇದೇ ಸಂದರ್ಭದಲ್ಲಿ ಹೊಗಳಿದ್ದಾರೆ.

ಬುಧವಾರ ಡೊನಾಲ್ಡ್​ ಟ್ರಂಪ್​, ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಿಂದ ಬೇಗನೆ ಹೊರಡಬೇಕಾಗಿ ಬಂದ ಕಾರಣ ಅವರ ಯೋಜಿತ ಸಭೆ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಧಾನಿ ಮೋದಿ ಮತ್ತು ಟ್ರಂಪ್ 35 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದರು. ಪಾಕಿಸ್ತಾನವೇ ಕದನ ವಿರಾಮಕ್ಕಾಗಿ ಒತ್ತಾಯಿಸಿತು ಎಂದು ಪ್ರಧಾನಿ ಮೋದಿ, ಟ್ರಂಪ್ ಅವರಿಗೆ ತಿಳಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗಾರರಿಗೆ ತಿಳಿಸಿದರು.

ಪಹಲ್ಗಾಮ್​ ದಾಳಿ ಬಳಿಕ ನಡೆದ ಸಂಪೂರ್ಣ ಘಟನಾವಳಿಗಳ ಸರಣಿಯ ಯಾವುದೇ ಹಂತದಲ್ಲಿ, ಯಾವುದೇ ಮಟ್ಟದಲ್ಲಿ, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆಯಾಗಲಿ ಅಥವಾ ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕದ ಮಧ್ಯಸ್ಥಿಕೆ ಕುರಿತು ಯಾವುದೇ ಪ್ರಸ್ತಾಪವಾಗಲಿ ಅಥವಾ ಚರ್ಚೆಯಾಗಲಿ ನಡೆದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಮಿಲಿಟರಿ ಕ್ರಮವನ್ನು ನಿಲ್ಲಿಸುವ ಚರ್ಚೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ ಎರಡು ಸಶಸ್ತ್ರ ಪಡೆಗಳ ನಡುವಿನ ಸಂವಹನ ಮಾರ್ಗಗಳ ಮೂಲಕ ನಡೆಯಿತು ಮತ್ತು ಪಾಕಿಸ್ತಾನದ ಕೋರಿಕೆಯ ಮೇರೆಗೆ ಕದನ ವಿರಾಮವನ್ನು ಪ್ರಾರಂಭಿಸಲಾಯಿತು ಎಂದು ಮೋದಿ, ಟ್ರಂಪ್​ಗೆ ಸ್ಪಷ್ಟಪಡಿಸಿದ್ದಾರೆ ಎಂದು ಮಿಶ್ರಿ ಹೇಳಿದರು.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗುವ ಕೆಲವು ಗಂಟೆಗಳ ಮೊದಲು, ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾನು ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಲೇ ಇದ್ದರು ಮತ್ತು ಅದೇ ಸಮಯದಲ್ಲಿ, ಪ್ರಧಾನಿ ಮೋದಿ "ಬಹಳ ಪ್ರಭಾವಶಾಲಿ" ಅಂತಾನೂ ಹೇಳುತ್ತಿದ್ದರು.

ನಾನು ಪಾಕಿಸ್ತಾನ ಮತ್ತು ಭಾರತ ನಡುವಿನ ಯುದ್ಧವನ್ನು ನಿಲ್ಲಿಸಿದೆ. ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಅದೇ ರೀತಿ ಮೋದಿ ಒಬ್ಬ ಅದ್ಭುತ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ನಿನ್ನೆ ರಾತ್ರಿ ನಾನು ಅವರೊಂದಿಗೆ ಮಾತನಾಡಿದೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ನಾನು ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಿದೆ. ಈ ವ್ಯಕ್ತಿ (ಬಹುಶಃ ಅಸಿಮ್ ಮುನೀರ್ ಅವರನ್ನು ಉಲ್ಲೇಖಿಸಿ) ಪಾಕಿಸ್ತಾನದ ಕಡೆಯಿಂದ ಯುದ್ಧವನ್ನು ನಿಲ್ಲಿಸುವಲ್ಲಿ ಪ್ರಭಾವ ಬೀರಿದರು. ಭಾರತದ ಕಡೆಯಿಂದ ಮೋದಿ ಮತ್ತು ಇತರರು ಪ್ರಭಾವ ಬೀರಿದರು. ಇವೆರಡೂ ಪರಮಾಣು ರಾಷ್ಟ್ರಗಳು. ಹೀಗಾಗಿ ನಾನು ಯುದ್ಧವನ್ನು ನಿಲ್ಲಿಸಿದೆ ಎಂದು ಟ್ರಂಪ್ ಮತ್ತೊಮ್ಮೆ ತಮ್ಮ ಮೊಂಡು ವಾದವನ್ನು ಮಂಡಿಸಿದರು.

ಟ್ರಂಪ್​ ವಿರುದ್ಧ ಭಾರತೀಯರ ಆಕ್ರೋಶ

ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ ಎಂದು ಹೇಳುವುದರ ಜೊತೆಗೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೂತ್ರಧಾರ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್ ಅವರನ್ನು ಟ್ರಂಪ್ ಹೊಗಳಿರುವುದು ಇದೀಗ ಟೀಕೆಗೆ ಗುರಿಯಾಗಿದೆ. ಟ್ರಂಪ್ ಅವರ ವರ್ತನೆಗೆ ಭಾರತೀಯರು ಕೋಪಗೊಂಡಿದ್ದಾರೆ. ಪಾಕಿಸ್ತಾನ, ಭಾರತದ ಶತ್ರು ಎಂದು ತಿಳಿದಿದ್ದರೂ, ಟ್ರಂಪ್ ಪಾಕಿಸ್ತಾನಕ್ಕೆ ಒತ್ತು ನೀಡುತ್ತಿರುವುದು ಮತ್ತು ಆ ದೇಶದೊಂದಿಗೆ ಅವರ ನಿಕಟತೆ ಭಾರತೀಯರನ್ನು ತೀವ್ರವಾಗಿ ಕೆರಳಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net