ಕಂಬ್ಯಾಕ್​ ಕಿಂಗ್ಸ್​: 8 ವರ್ಷಗಳ ಬಳಿಕ ಕಣಕ್ಕಿಳಿಯಲು ಸಜ್ಜಾದ ಕನ್ನಡಿಗ

blank

ಬೆಂಗಳೂರು: ಭಾರತೀಯ ಕ್ರಿಕೆಟ್​ನಲ್ಲಿ ವೀರೇಂದ್ರ ಸೆಹ್ವಾಗ್​ ಬಳಿಕ ತ್ರಿಶತಕ ಸಿಡಿಸಿದ ಏಕೈಕ ಬ್ಯಾಟರ್​ ಎಂಬ ಐತಿಹಾಸಿಕ ದಾಖಲೆ ಹೊಂದಿದ್ದರೂ ಕನ್ನಡಿಗ ಕರುಣ್​ ನಾಯರ್​, 2017ರಲ್ಲಿ ಕೇವಲ 6 ಟೆಸ್ಟ್​ ಪಂದ್ಯಗಳನ್ನು ಆಡಿದ ಬಳಿಕ ಭಾರತ ತಂಡದಿಂದ ಹೊರಬಿದ್ದಿದ್ದರು. ನಂತರ ದೇಶೀಯ ಕ್ರಿಕೆಟ್​ಗೆ ಮರಳಿದ ಅವರು ತೀವ್ರ ರನ್​ಬರ ಎದುರಿಸಿದ್ದರಿಂದ 2022ರಲ್ಲಿ ಕರ್ನಾಟಕ ತಂಡದಿಂದಲೂ ಹೊರಬಿದ್ದಿದ್ದರು. ಇದರಿಂದಾಗಿ ಕರುಣ್​ ನಾಯರ್​ರ ಕ್ರಿಕೆಟ್​ ಜೀವನ ಬಹುತೇಕ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡಿದ್ದರು.

ಕ್ರಿಕೆಟ್​ ಆಡುವ ಅವಕಾಶ ಸಿಗದೆ ಬೇಸತ್ತಿದ್ದ ಕರುಣ್​ ಕೂಡ ಟ್ವಿಟರ್​ನಲ್ಲಿ (ಈಗಿನ ಎಕ್ಸ್​), “ಡಿಯರ್​ ಕ್ರಿಕೆಟ್​, ದಯವಿಟ್ಟು ನನಗೆ ಇನ್ನೊಂದು ಅವಕಾಶ ಕೊಡು’ ಎಂದು ಬೇಡಿಕೊಂಡಿದ್ದರು. ಈ ಪ್ರಾರ್ಥನೆಯ ಲವೋ ಎಂಬಂತೆ ಅಲ್ಲಿಂದ ನಂತರ ಕರುಣ್​, ಕ್ರಿಕೆಟ್​ ಜೀವನ ಮರುಹುಟ್ಟು ಪಡೆಯಲಾರಂಭಿಸಿತು. 2023ರ ದೇಶೀಯ ಕ್ರಿಕೆಟ್​ ಋತುವಿನಲ್ಲಿ ವಿದರ್ಭಕ್ಕೆ ವಲಸೆ ಹೋದ ಕರುಣ್​, ಮತ್ತೆ ಲಯ ಕಂಡುಕೊಳ್ಳಲಾರಂಭಿಸಿದರು. 2024ರಲ್ಲಿ ಕೌಂಟಿ ಕ್ರಿಕೆಟ್​ನಲ್ಲೂ ಆಡಿ ಗಮನಸೆಳೆದರು. ಕಳೆದ 2024&25ರ ದೇಶೀಯ ಕ್ರಿಕೆಟ್​ ಋತುವಿನಲ್ಲಂತೂ ಅವರು ಹರಿಸಿದ ಭಾರಿ ರನ್​ಪ್ರವಾಹ, ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಭಾರತ ತಂಡದ ಬಾಗಿಲು ತೆರೆಯುವಂತೆ ಮಾಡಿತು.

ಇಂಗ್ಲೆಂಡ್​ ಪ್ರವಾಸಕ್ಕೆ ಭಾರತ ಟೆಸ್ಟ್​ ತಂಡದಲ್ಲಿ ಮರಳಿ ಸ್ಥಾನ ಸಂಪಾದಿಸಿದ 33 ವರ್ಷದ ಕರುಣ್​ ಇದೀಗ ಲೀಡ್ಸ್​ನಲ್ಲಿ ಶುಕ್ರವಾರದಿಂದ ನಡೆಯಲಿರುವ ಮೊದಲ ಟೆಸ್ಟ್​ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಭಾರತ ತಂಡಕ್ಕೆ ಮರಳಲು ಬಯಸುವ ಹಲವು ಕ್ರಿಕೆಟಿಗರಿಗೆ ಅವರ ಈ ಪುನರಾಗಮನ ಸ್ಫೂರ್ತಿ ಎನಿಸಿದೆ. ಆದರೆ ಭಾರತೀಯ ಕ್ರಿಕೆಟ್​ನಲ್ಲಿ ಈ ರೀತಿಯ ಪುನರಾಗಮನ ಹೊಸದಲ್ಲ. ಬಹುತೇಕ ವೃತ್ತೀಜಿವನ ಮುಗಿದೇ ಹೋಯಿತು ಎಂಬ ಹಂತದಿಂದ ಭಾರತ ತಂಡಕ್ಕೆ ಮರಳಿ ಸಾಧನೆ ತೋರಿದ ದೃಷ್ಟಾಂತಗಳು ಹಿಂದೆಯೂ ಇದ್ದವು. ಅಂಥ ಕೆಲ “ಕಂಬ್ಯಾಕ್​’ ಸಾಧಕರ ಸಂಪ್ತ ವಿವರ ಇಲ್ಲಿದೆ…

ಮೊಹಿಂದರ್​ ಅಮರ್​ನಾಥ್​
ಆಸ್ಟ್ರೆಲಿಯಾ ಎದುರು 1969ರಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರೂ, ಸ್ಥಾನ ಕಾಯ್ದುಕೊಳ್ಳಲಾಗದೆ ಹೊರಬಿದ್ದಿದ್ದ ಮೊಹಿಂದರ್​ ಅಮರ್​ನಾಥ್​, ನಂತರ 7 ವರ್ಷಗಳ ಕಾಲ ಅವಕಾಶ ವಂಚಿತರಾಗಿದ್ದರು. 1976ರಲ್ಲಿ ಮತ್ತೆ ಟೆಸ್ಟ್​ ತಂಡಕ್ಕೆ ಪುನರಾಗಮನ ಕಂಡ ಅವರು, ಆಲ್ರೌಂಡರ್​ ನಿರ್ವಹಣೆಯೊಂದಿಗೆ ಗಮನಸೆಳೆದರೂ, ಮತ್ತೆ ಒಳಗೆ&ಹೋಗುತ್ತಿದ್ದರು. 1982ರಲ್ಲಿ ಮತ್ತೆ ಪುನರಾಗಮನ ಕಂಡ ಅವರು, 1983ರ ವಿಶ್ವಕಪ್​ನಲ್ಲಿ ಭಾರತ ಗೆಲುವಿನ ರೂವಾರಿಯಾಗಿ ಮಿಂಚಿದ್ದರು. ವೃತ್ತೀಜಿವನದಲ್ಲಿ ಹಲವು ಬಾರಿ ಆಯ್ಕೆಗಾರರಿಂದ ಕೊಕ್​ ಪಡೆದಿದ್ದ ಮೊಹಿಂದರ್​ ಪ್ರತಿ ಬಾರಿಯೂ ಪುನರಾಗಮನ ಕಾಣುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಇವರು ಭಾರತೀಯ ಕ್ರಿಕೆಟ್​ನ ಮೊದಲ ಕಂಬ್ಯಾಕ್​ ಕಿಂಗ್​ ಎನ್ನಬಹುದು.

ಸೌರವ್​ ಗಂಗೂಲಿ
ಭಾರತೀಯ ಕ್ರಿಕೆಟ್​ ಕಂಡ ಯಶಸ್ವಿ ನಾಯಕ ಸೌರವ್​ ಗಂಗೂಲಿ 1992ರಲ್ಲಿ ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾದರೂ, 1 ಏಕದಿನ ಪಂದ್ಯವನ್ನಷ್ಟೇ ಆಡಿ ಹೊರಬಿದ್ದಿದ್ದರು. 4 ವರ್ಷಗಳ ಬಳಿಕ ಅವರ ಪುನರಾಗಮನ ಭರ್ಜರಿಯಾಗಿತ್ತು. ಲಾರ್ಡ್ಸ್​ನಲ್ಲಿ ಆಡಿದ ಪದಾರ್ಪಣೆಯ ಟೆಸ್ಟ್​ನಲ್ಲೇ ಶತಕ ಸಿಡಿಸಿ ಮಿಂಚಿದ್ದರು. 2000ದಲ್ಲಿ ನಾಯಕತ್ವವನ್ನೂ ಅಲಂಕರಿಸಿ ಭಾರತೀಯ ಕ್ರಿಕೆಟ್​ನ ದೆಸೆಯನ್ನೇ ಬದಲಾಯಿಸಿದ್ದರು. ಆದರೆ 2005ರಲ್ಲಿ ಗ್ರೆಗ್​ ಚಾಪೆಲ್​ ಕೋಚ್​ ಆದ ಬಳಿಕ ನಾಯಕತ್ವ ಮಾತ್ರವಲ್ಲ ತಂಡದಲ್ಲಿ ಸ್ಥಾನವನ್ನೂ ಕಳೆದುಕೊಂಡಿದ್ದರು. ಇಷ್ಟಕ್ಕೆ ಕುಗ್ಗದ ಅವರು, ಕೌಂಟಿ, ರಣಜಿಯಲ್ಲಿ ರನ್​ಮಳೆ ಹರಿಸಿ 2007ರಲ್ಲಿ ಯಶಸ್ವಿ ಪುನರಾಗಮನ ಕಂಡರು. ಪಾಕ್​ ವಿರುದ್ಧ ಟೆಸ್ಟ್​ನಲ್ಲಿ 239 ರನ್​ ಸಿಡಿಸಿದ್ದರು. ಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಸರಣಿಶ್ರೇಷ್ಠರೂ ಆಗಿ ಆ ವರ್ಷದ ವಿಶ್ವಕಪ್​ಗೂ ಆಯ್ಕೆಯಾಗಿದ್ದರು. ಕೊನೆಗೆ 2008ರಲ್ಲಿ ತನ್ನ ಇಚ್ಛೆಯಂತೆಯೇ ನಿವೃತ್ತಿ ಹೊಂದಿ ನಿರ್ಗಮಿಸಿದ್ದರು.

ಯುವರಾಜ್​ ಸಿಂಗ್​
ಭಾರತದ ಅವಳಿ ವಿಶ್ವಕಪ್​ ಹೀರೋ ಯುವರಾಜ್​ ಸಿಂಗ್​ 2011ರ ಏಕದಿನ ವಿಶ್ವಕಪ್​ ಬಳಿಕ ಕ್ಯಾನ್ಸರ್​ಗೆ ತುತ್ತಾದಾಗ ಅವರ ವೃತ್ತೀಜಿವನಕ್ಕೆ ಬಹುದೊಡ್ಡ ಹೊಡೆತ ಎದುರಾಯಿತು. ಆದರೆ ಒಂದೇ ವರ್ಷದಲ್ಲಿ ಕ್ಯಾನ್ಸರ್​ ಗೆದ್ದು ಭಾರತ ತಂಡಕ್ಕೆ ಮರಳಿದ್ದಲ್ಲದೆ 2012ರ ಟಿ20 ವಿಶ್ವಕಪ್​ನಲ್ಲಿ ಆಡಿದರು. 2014ರ ಟಿ20 ವಿಶ್ವಕಪ್​ ಬಳಿಕ ಆಯ್ಕೆಗಾರರ ಕಡೆಗಣನೆಗೆ ಒಳಗಾಗಿ 2015ರ ಏಕದಿನ ವಿಶ್ವಕಪ್​ನಿಂದ ವಂಚಿತರಾದ ಯುವರಾಜ್​, 2016ರಲ್ಲಿ ಮತ್ತೆ ಪುನರಾಗಮನ ಕಂಡು ಟಿ20 ವಿಶ್ವಕಪ್​ ಆಡಿದರು. 2017ರಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲೂ ಕೊನೆಯದಾಗಿ ಆಡಿದ್ದರು.

ದಿನೇಶ್​ ಕಾರ್ತಿಕ್​
ಭಾರತ ಪರ 2004ರಲ್ಲೇ ಪದಾರ್ಪಣೆ ಮಾಡಿದರೂ, ಧೋನಿ ಯಶಸ್ಸಿನ ನಂತರ ದಿನೇಶ್​ ಕಾರ್ತಿಕ್​ಗೆ ವಿಕೆಟ್​ ಕೀಪರ್​ ಆಗಿ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿಲ್ಲ. ಅಲ್ಲೊಂದು, ಇಲ್ಲೊಂದು ಅವಕಾಶ ಪಡೆದಿದ್ದ ಅವರಿಗೆ 2019ರ ಏಕದಿನ ವಿಶ್ವಕಪ್​ ಬಳಿಕ ಭಾರತ ತಂಡದ ಬಾಗಿಲು ಬಹುತೇಕ ಮುಚ್ಚಿತ್ತು. ಆದರೆ 2022ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಫಿನಿಷರ್​ ಆಗಿ ಅಮೋ ನಿರ್ವಹಣೆ ತೋರಿದ ಲವಾಗಿ 37ನೇ ವಯಸ್ಸಿನಲ್ಲಿ ಭಾರತ ಟಿ20 ತಂಡಕ್ಕೆ ಮರಳಿದರು. ಬಳಿಕ 2022ರ ಟಿ20 ವಿಶ್ವಕಪ್​ನಲ್ಲೂ ಆಡುವ ಅವಕಾಶ ಸಂಪಾದಿಸಿದ್ದರು.

ಆಶಿಶ್​ ನೆಹ್ರಾ
ಏಕದಿನ ಕ್ರಿಕೆಟ್​ನಲ್ಲಿ 2001ರಿಂದ 2005ರವರೆಗೆ ಭಾರತ ತಂಡದ ಪ್ರಮುಖ ಭಾಗವಾಗಿದ್ದ ಎಡಗೈ ವೇಗಿ ಆಶಿಶ್​ ನೆಹ್ರಾ, ವಿವಿಧ ಗಾಯದ ಸಮಸ್ಯೆಗಳ ನಡುವೆ 4 ವರ್ಷಗಳ ಕಾಲ ಕಡೆಗಣನೆಗೆ ಒಳಗಾಗಿದ್ದರು. 2009ರಲ್ಲಿ ಮತ್ತೆ ಭಾರತ ತಂಡಕ್ಕೆ ಮರಳಿದ ಅವರು 2011ರ ಏಕದಿನ ವಿಶ್ವಕಪ್​ ವಿಜೇತ ತಂಡದ ಭಾಗವಾಗಿದ್ದರು. ನಂತರದಲ್ಲಿ 5 ವರ್ಷಗಳ ಬಳಿಕ ಚುಟುಕು ಕ್ರಿಕೆಟ್​ಗೆ ಮರಳಿದ್ದ ಅವರು 2016ರ ಟಿ20 ವಿಶ್ವಕಪ್​ನಲ್ಲೂ ಆಡಿದ್ದರು.

ಜಾವಗಲ್​ ಶ್ರೀನಾಥ್​
ಕಪಿಲ್​ ದೇವ್​ ನಂತರದಲ್ಲಿ ಭಾರತದ ವೇಗದ ಬೌಲಿಂಗ್​ ವಿಭಾಗಕ್ಕೆ ಬಲ ತುಂಬಿದ್ದ ಕನ್ನಡಿಗ ಜಾವಗಲ್​ ಶ್ರೀನಾಥ್​, 2001ರಲ್ಲಿ ಜಹೀರ್​ ಖಾನ್​, ಅಜಿತ್​ ಅಗರ್ಕರ್​ರಂಥ ವೇಗಿಗಳು ಮಿಂಚಲಾರಂಭಿಸಿದ ಬಳಿಕ ಏಕದಿನ ಕ್ರಿಕೆಟ್​ನಿಂದ ಬಹುತೇಕ ನಿವೃತ್ತಿ ಹೊಂದಿದ್ದರು. ಆದರೆ ಆಗಿನ ನಾಯಕ ಸೌರವ್​ ಗಂಗೂಲಿ ದೂರವಾಣಿ ಕರೆ ಮಾಡಿ ವಿನಂತಿಸಿದ ಕಾರಣ, 2003ರ ಏಕದಿನ ವಿಶ್ವಕಪ್​ಗೆ ಮುನ್ನ ಏಕದಿನ ಕ್ರಿಕೆಟ್​ಗೆ ಮತ್ತೆ ಮರಳಿದರು.ವಿಶ್ವಕಪ್​ನಲ್ಲಿ 11 ಪಂದ್ಯಗಳಲ್ಲಿ 16 ವಿಕೆಟ್​ ಕಬಳಿಸಿ ಮಿಂಚಿದ್ದರು ಮತ್ತು ಭಾರತ ಫೈನಲ್​ಗೇರಲು ನೆರವಾಗಿದ್ದರು.

 

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…