

Ahmedabad Plane Crash : ಇತ್ತೀಚೆಗೆ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿದ್ದು ಎಲ್ಲರಿಗೂ ತಿಳಿದಿದೆ. ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಘಟನಾ ಸ್ಥಳವು ಶವಗಳಿಂದಲೇ ತುಂಬಿತ್ತು. ವಿಮಾನದಲ್ಲಿದ್ದ 241 ಮಂದಿ ಹಾಗೂ ವಿಮಾನ ಹಾಸ್ಟೆಲ್ಗೆ ಅಪ್ಪಳಿಸಿದ್ದರಿಂದ ಅದರಲ್ಲಿದ್ದ 29 ಮಂದಿ ಸೇರಿ ಒಟ್ಟು 270 ಜನರು ದುರಂತ ಸಾವಿಗೀಡಾದರು.
ಈ ಘಟನೆಯ ನೋವು ಇನ್ನೂ ಕೂಡ ಮಾಸಿಲ್ಲ. ವಿಮಾನ ಅಪಘಾತದ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಓಡಿ ಬಂದ ವ್ಯಕ್ತಿಯೊಬ್ಬ ಮಾನವೀಯತೆ ಮತ್ತು ಪ್ರಾಮಾಣಿಕತೆಯನ್ನು ಮೆರೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪತನದ ಸ್ಥಳದಲ್ಲಿ ಬಿದ್ದಿದ್ದ ಕೈಚೀಲಗಳು, ಬಟ್ಟೆಗಳ ಬಳಿ ಸುಮಾರು 70 ತೊಲ ಅಂದರೆ, 800 ಗ್ರಾಂಗೂ ಅಧಿಕ ಚಿನ್ನದ ಆಭರಣಗಳು, 80 ಸಾವಿರ ರೂಪಾಯಿ ನಗದು, ಕೆಲವು ಅಮೆರಿಕನ್ ಡಾಲರ್ಗಳು, ಪಾಸ್ಪೋರ್ಟ್ಗಳು ಮತ್ತು ಭಗವದ್ಗೀತೆಯ ಪುಸ್ತಕದಂತಹ ಅನೇಕ ಬೆಲೆಬಾಳುವ ವಸ್ತುಗಳನ್ನು ಪತ್ತೆಹಚ್ಚಿದನು. ಆತ ಅವೆಲ್ಲವನ್ನೂ ಪೊಲೀಸರಿಗೆ ಒಪ್ಪಿಸಿ, ಪ್ರಾಮಾಣಿಕತೆ ಮೆರೆದಿದ್ದಾನೆ.
ಆತನ ಹೆಸರು ರಾಜೇಶ್ ಪಟೇಲ್. ಅಪಘಾತ ಸಂಭವಿಸಿದಾಗ ಅವರು ಅಪಘಾತ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿದ್ದರು. ಸ್ಫೋಟದ ಶಬ್ದ ಕೇಳಿದ ತಕ್ಷಣ ಅವರು ಅಲ್ಲಿಗೆ ಓಡಿ ಬಂದರು. ಬೆಂಕಿ ಎಷ್ಟೇ ಭೀಕರವಾಗಿದ್ದರೂ ಅವರು ಹಿಂದೆ ಸರಿಯಲಿಲ್ಲ. ಯಾರೂ ಮುಟ್ಟಲಾಗದಷ್ಟು ಶವಗಳು ಅಲ್ಲಿ ಬಿದ್ದಿದ್ದವು. ಆದಾಗ್ಯೂ, ರಾಜೇಶ್ ಪಟೇಲ್ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಮೊದಲ 20 ನಿಮಿಷಗಳ ಕಾಲ ನಮಗೆ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಬೆಂಕಿ ಉರಿಯುತ್ತಿತ್ತು. ಅದು ಸ್ವಲ್ಪ ಕಡಿಮೆಯಾದ ನಂತರ, ನಾವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು ಎಂದು ರಾಜೇಶ್ ಹೇಳಿದರು.
ಅಪಘಾತದ ನಂತರ ರಾಜೇಶ್ ಸಹಾಯ ಮಾಡಲು ಹೋದಾಗ, ಅಲ್ಲಿ ಯಾವುದೇ ಸ್ಟ್ರೆಚರ್ಗಳು ಇರಲಿಲ್ಲ. ಸತ್ತವರು ಮತ್ತು ಗಂಭೀರವಾಗಿ ಗಾಯಗೊಂಡವರನ್ನು ಹಳೆಯ ಸೀರೆಗಳು, ಬೆಡ್ಶೀಟ್ಗಳು ಮತ್ತು ಗೋಣಿಚೀಲಗಳಲ್ಲಿ ಆಂಬ್ಯುಲೆನ್ಸ್ಗಳಿಗೆ ಸಾಗಿಸಲಾಯಿತು ಎಂದು ರಾಜೇಶ್ ಹೇಳಿದರು.
ಈ ಹಿಂದೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ರಾಜೇಶ್ ಪಟೇಲ್, 2008ರ ಅಹಮದಾಬಾದ್ ಸ್ಫೋಟದ ನಂತರ ಸ್ವಯಂಸೇವಕರಾಗಿಯೂ ಸೇವೆ ಸಲ್ಲಿಸಿದ್ದರು. ಬಹುಶಃ ಅವರ ಜೀವನದ ಅನುಭವಗಳು ಅವರಿಗೆ ಈ ಧೈರ್ಯವನ್ನು ನೀಡಿರಬಹುದು. ಈ ಮಧ್ಯೆ, ಮೃತರ ಆಭರಣ ಮತ್ತು ಹಣವನ್ನು ಮೃತರ ಕುಟುಂಬಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)