ಮೊದಲ 15 ಎಸೆತದಲ್ಲಿ ಕೇವಲ 11 ರನ್​... ಆದ್ರೆ ಮುಂದಿನ 34 ಬಾಲ್​ನಲ್ಲಿ 13 ಸಿಕ್ಸರ್​! ಮ್ಯಾಕ್ಸಿ ಅಬ್ಬರದ ಬ್ಯಾಟಿಂಗ್​ | Glenn Maxwell

Glenn Maxwell
Published on

Glenn Maxwell : ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಕೊನೆಗೂ ತಮ್ಮ ಫಾರ್ಮ್​ಗೆ ಮರಳಿದ್ದಾರೆ. 2025ರ ಮೇಜರ್ ಲೀಗ್ ಕ್ರಿಕೆಟ್‌ (ಎಂಎಲ್​ಸಿ) ನಲ್ಲಿ ಮ್ಯಾಕ್ಸಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ವಾಷಿಂಗ್ಟನ್ ಫ್ರೀಡಂ ಅನ್ನು ಪ್ರತಿನಿಧಿಸುವ ಮ್ಯಾಕ್ಸಿ, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ನಿನ್ನೆ (ಜೂನ್​ 17) ನಡೆದ ಪಂದ್ಯದಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಗಳಿಸಿದರು. ಈ ಪಂದ್ಯದಲ್ಲಿ ಒಟ್ಟು 49 ಎಸೆತಗಳನ್ನು ಎದುರಿಸಿದ ಮ್ಯಾಕ್ಸಿ, 2 ಬೌಂಡರಿಗಳು ಮತ್ತು 13 ಸಿಕ್ಸರ್‌ಗಳ ಸಹಾಯದಿಂದ 106 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡವು ಕೇವಲ 68 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಮೈದಾನಕ್ಕೆ ಇಳಿದ ಮ್ಯಾಕ್ಸ್‌ವೆಲ್ ಆರಂಭದಲ್ಲಿ ಬಹಳ ನಿಧಾನವಾಗಿ ಆಡಿದರು. ಮೊದಲ 15 ಎಸೆತಗಳಲ್ಲಿ ಕೇವಲ 11 ರನ್‌ಗಳನ್ನು ಗಳಿಸಿದರು. ನಂತರ ತಮ್ಮ ಗೇರ್​ ಬದಲಿಸಿದ ಮ್ಯಾಕ್ಸಿ, ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಬದಲಾಯಿಸಿದರು. ಸಿಕ್ಸರ್‌ಗಳ ಸುರಿಮಳೆಯೊಂದಿಗೆ ಮೈದಾನದಲ್ಲಿ ಘರ್ಜಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿಯುವ ಮೂಲಕ ತಮ್ಮ ತಂಡಕ್ಕೆ ಬೃಹತ್ ಸ್ಕೋರ್ ಒದಗಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ಫ್ರೀಡಂ ತಂಡ, ಮ್ಯಾಕ್ಸ್​ವೆಲ್​ ಅವರ ಭರ್ಜರಿ ಶತಕದಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಮ್ಯಾಕ್ಸ್‌ವೆಲ್ ಹೊರತುಪಡಿಸಿ, ವಾಷಿಂಗ್ಟನ್ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಓವನ್ ಮಾತ್ರ (11 ಎಸೆತಗಳಲ್ಲಿ 32) ಮಿಂಚಿದರು. ರಾಚಿನ್ ರವೀಂದ್ರ (8), ಆಂಡ್ರಿಯಾಸ್ ಗೌಸ್ (12), ಮಾರ್ಕ್ ಚಾಪ್‌ಮನ್ (17) ಮತ್ತು ಜ್ಯಾಕ್ ಎಡ್ವರ್ಡ್ಸ್ (11) ವಿಫಲರಾದರು. ನೈಟ್ ರೈಡರ್ಸ್ ಬೌಲರ್‌ಗಳಲ್ಲಿ, ಕಾರ್ನೆ ಡ್ರೈ ಮತ್ತು ತನ್ವೀರ್ ಸಂಘ ತಲಾ ಎರಡು ವಿಕೆಟ್ ಪಡೆದರೆ, ಜೇಸನ್ ಹೋಲ್ಡರ್ ಒಂದು ವಿಕೆಟ್ ಪಡೆದರು.

ಬೃಹತ್ ಗುರಿಯನ್ನು ಬೆನ್ನಟ್ಟಿದ ನೈಟ್ ರೈಡರ್ಸ್ ತಂಡವು 16.3 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು. ಮ್ಯಾಕ್ಸ್‌ವೆಲ್ ತಂಡವು 113 ರನ್‌ಗಳಿಂದ ಜಯ ಸಾಧಿಸಿತು. ನೈಟ್ ರೈಡರ್ಸ್ ಪರ ಅಲೆಕ್ಸ್ ಹೇಲ್ಸ್, ಸುನಿಲ್ ನಾರಾಯಣ್​ ಮತ್ತು ಉನ್ಮುಕ್ತ್ ಚಂದ್ ಡಕ್ ಔಟ್ ಆದರು. ಸೈಫ್ ಬಾದರ್ (32) ಮಾತ್ರ ರನ್ ಗಳಿಸಿದರು. ವಾಷಿಂಗ್ಟನ್ ಫ್ರೀಡಂ ಬೌಲರ್‌ಗಳ ಪರ ಮಿಚೆಲ್ ಓವನ್ ಮತ್ತು ಜ್ಯಾಕ್ ಎಡ್ವರ್ಡ್ಸ್ ತಲಾ ಮೂರು ವಿಕೆಟ್ ಪಡೆದರು. ಸೌರಭ್ ನೇತ್ರವಾಲ್ಕರ್ ಎರಡು ವಿಕೆಟ್ ಪಡೆದರೆ, ಮಾರ್ಕ್ ಅಡೈರ್ ಮತ್ತು ಇಯಾನ್ ಹಾಲೆಂಡ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net