

Actress Ramya : ನಟಿ ರಮ್ಯಾ ಮೊದಲ ಬಾರಿ ತಮ್ಮ ತಂದೆಯ, ತಾಯಿ ಮತ್ತು ಪಾರ್ಟ್ನರ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೆ ಪಾಡ್ಕಾಸ್ಟ್ ಒಂದರಲ್ಲಿ ವೈಯಕ್ತಿಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನನ್ನ ತಾಯಿ ಸಿಂಗಲ್ ಮದರ್ ಆಗಿದ್ದರು. ಹೀಗಾಗಿಯೇ ನಾನು ಬಾಲ್ಯದಿಂದಲೇ ಸ್ವತಂತ್ರವಾಗಿ ಬೆಳೆದೆ. ನಾಲ್ಕನೇ ವಯಸ್ಸಿನಲ್ಲೇ ಊಟಿಯ ಬೋರ್ಡಿಂಗ್ ಶಾಲೆ ಸೇರಿದೆ. ಆಗ ಅಲ್ಲಿ ಅಪ್ಪನ ಹೆಸರೇನು? ಯಾರು? ಅಂತೆಲ್ಲ ಕೇಳಿದರೆ, ನನಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ನಾನು ಡಿಫರೆಂಟ್ ಎಂಬಂತೆ ಎಲ್ಲರೂ ನೋಡುತ್ತಿದ್ದರು. ನನಗೆ ಸರ್ನೇಮ್ ಕೂಡ ಇರಲಿಲ್ಲ. ಪಾಸ್ಪೋರ್ಟ್ ಅಥವಾ ಪರೀಕ್ಷೆ ಸಮಯದಲ್ಲಿ ಅಪ್ಪನ ಹೆಸರು ಅಥವಾ ಸರ್ನೇಮ್ ಬರೆಯಬೇಕು. ಹೀಗಾಗಿ ಹೆಸರಿನ ಜಾಗದಲ್ಲಿ ದಿವ್ಯ ಅಂತ ಬರೆದು, ಸರ್ನೇಮ್ ಜಾಗದಲ್ಲಿ ಸ್ಪಂದನ ಎಂದು ಬರೆಯುತ್ತಿದ್ದೆ. ಜನ ನನ್ನನ್ನು ಸ್ವೀಕರಿಸುತ್ತಾರೋ ಇಲ್ಲವೋ ಅಂತ ಯೋಚಿಸುತ್ತಿದ್ದೆ. ನಾನೂ ಎಲ್ಲರಂತಿದ್ದರೂ ಸಮಾಜ ನನ್ನನ್ನು ವಿಭಿನ್ನವಾಗಿ ನೋಡುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ರಮ್ಯಾ ಸಾಕುತಂದೆ ಉದ್ಯಮಿ ನಾರಾಯಣ್ ಜತೆಗಿನ ಬಾಂಧವ್ಯದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿರುವ ರಮ್ಯಾ, ‘ಅಪ್ಪ ಯಾವತ್ತೂ ಹೀಗೇ ಇರು ಅಂತ ಹೇಳುತ್ತಿರಲಿಲ್ಲ. ಅವರ ಬಳಿ ಯಾರಾದರೂ ಸಹಾಯ ಕೇಳಿ ಬಂದರೆ, ಸುಳ್ಳು ಭರವಸೆ ನೀಡುತ್ತಿರಲಿಲ್ಲ. ಯಾರಿಗೂ ಗೊತ್ತಾಗದಂತೆ ಸಹಾಯ ಮಾಡುತ್ತಿದ್ದರು. ಅಮ್ಮನೂ ಹಾಗೇ ಇದ್ದರು. ನನ್ನ ಬಹುತೇಕ ಹುಟ್ಟುಹಬ್ಬಗಳನ್ನು ಅನಾಥಾಶ್ರಮಗಳಲ್ಲಿ ಆಚರಿಸುತ್ತಿದ್ದೆ. ಅಮ್ಮನ ಬಳಿ ನೂರು ರೂ. ಇದ್ದರೂ, ಅದನ್ನು ಯಾರಿಗಾದರೂ ಕಷ್ಟದಲ್ಲಿರುವವರಿಗೆ ಕೊಟ್ಟುಬಿಡುತ್ತಿದ್ದರು’ ಎಂದು ಹೇಳಿಕೊಂಡಿದ್ದಾರೆ.
2011ರಿಂದ ನಟಿ ರಮ್ಯಾ ಪೋರ್ಚುಗಲ್ ಮೂಲದ ಉದ್ಯಮಿ ರಫೇಲ್ ಜತೆ ಪ್ರೀತಿಯಲ್ಲಿದ್ದರು. ಕೆಲ ವರ್ಷಗಳ ಹಿಂದೆ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಆ ಬಳಿಕ ರಮ್ಯಾ ಖಾಸಗಿ ಜೀವನದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಪಾರ್ಟ್ನರ್ ಬಗ್ಗೆ ಮಾತನಾಡಿರುವ ಅವರು, ‘ನನ್ನ ಪಾರ್ಟ್ನರ್ ನೀನ್ಯಾಕೆ ನನ್ನ ಬಳಿ ಏನೂ ಹೇಳಿಕೊಳ್ಳುವುದಿಲ್ಲ? ನಿನಗೇನಾಗುತ್ತಿದೆ? ನಿನ್ನನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಎಂದು ಕೇಳುತ್ತಿರುತ್ತಾರೆ. ಆದರೆ, ನಾನಿರುವುದೇ ಹೀಗೆ. ಮತ್ತೊಬ್ಬರ ಬಳಿ ಹೇಳಿಕೊಳ್ಳುವುದು ದೌರ್ಬಲ್ಯ ಅಂತ ನಂಬುವ ಕಾರಣ, ಅಷ್ಟು ಸುಲಭವಾಗಿ ನಾನು ನನ್ನೊಳಗಿನ ವಿಷಯಗಳನ್ನು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲ ಎಂದಿದ್ದಾರೆ. ಅವರ ಈ ಹೇಳಿಕೆಯ ಬಳಿಕ ಜಾಲತಾಣದಲ್ಲಿ ಅವರ ಪಾರ್ಟ್ನರ್ ಯಾರು ಎಂಬ ಚರ್ಚೆ ಪ್ರಾರಂಭವಾಗಿದೆ.