ಒಂದೇ ಚಿತ್ರದಲ್ಲಿ ಶಾರುಖ್​, ಸಲ್ಮಾನ್​, ಆಮೀರ್​ ಹಾಕ್ಕೊಂಡ್ರು ಹಿಟ್​ ಗ್ಯಾರಂಟಿ ಇಲ್ಲ! ರೋಹಿತ್​, ಹಾರ್ದಿಕ್​ಗೆ ವೀರೂ ಟಾಂಗ್

Virender Sehwag,
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್, ಕ್ರಿಕೆಟ್​ ಪಂದ್ಯಗಳು ಮತ್ತು ಆಟಗಾರರ ಪ್ರದರ್ಶನದ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕ್ರಿಕೆಟ್​ನಲ್ಲಿ ಯಾವುದೇ ವಿಶೇಷ ಘಟನೆ ನಡೆದಾಗಲೂ ವೀರೂ ಭಾಯ್ ತಮ್ಮ ವಿಡಂಬನಾತ್ಮಕ ಕೌಂಟರ್‌ಗಳನ್ನು ಎಸೆಯುವಲ್ಲಿ ಸಿದ್ಧಹಸ್ತರು. ಇದೀಗ ವೀರೂ ಮುಂಬೈ ಇಂಡಿಯನ್ಸ್​ ತಂಡದ ಬಗ್ಗೆ ಮಾಡಿರುವ ಕಾಮೆಂಟ್ ಸಿಕ್ಕಾಪಟ್ಟೆ​ ವೈರಲ್​ ಆಗುತ್ತಿದೆ.

ಮುಂಬೈ ತಂಡ 13 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಸೋತು 4ರಲ್ಲಿ ಮಾತ್ರ ಗೆದ್ದು ಟೂರ್ನಿಯಿಂದ ಹೊರಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ 2025ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ರೋಹಿತ್​ ಶರ್ಮ, ಹಾರ್ದಿಕ್ ಪಾಂಡ್ಯ ಮತ್ತು ಇಶಾನ್​ ಕಿಶಾನ್​ ಸೇರಿದಂತೆ​ ತಂಡದ ಸ್ಟಾರ್​ ಆಟಗಾರರನ್ನು ಹೊರಹಾಕುವಂತೆ ಮುಂಬೈ ಫ್ರಾಂಚೈಸಿಗೆ ವೀರೂ ಸಲಹೆ ನೀಡಿದ್ದಾರೆ.

ಮುಂದಿನ ಸೀಸನ್​ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಮಾತ್ರ ಉಳಿಸಿಕೊಳ್ಳುವತ್ತ MI ಗಮನಹರಿಸಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ. ಸ್ಟಾರ್​ ಆಟಗಾರರ ದಂಡೇ ಇದ್ದರೂ ಹೀನಾಯವಾಗಿ ಟೂರ್ನಿಯಿಂದ ಹೊರಬಿದ್ದಿರುವುದರಿಂದ ವೀರೂ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸೀಸನ್​ಗೂ ಮುನ್ನ ರೋಹಿತ್ ಶರ್ಮರಿಂದ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಬದಲಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಹೀಗಿದ್ದರೂ ಕೂಡ ತಂಡದಿಂದ ಯಾವುದೇ ಉತ್ತಮ ಫಲಿತಾಂಶಗಳು ಬರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಿವುಡ್​ನ ಖಾನ್​ ತ್ರಿವಳಿಗಳನ್ನು ಹೆಸರಿಸಿ ಸ್ಟಾರ್​ ಆಟಗಾರರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ.

ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್ ಒಂದೇ ಚಿತ್ರದಲ್ಲಿ ನಟಿಸಿದರೆ ಹಿಟ್ ಸಿಗುವ ಗ್ಯಾರಂಟಿಯೇ ಇಲ್ಲ. ಹಿಟ್​ ಆಗುತ್ತದೆಯೇ? ಅದಕ್ಕಾಗಿ ನೀವು ಸರಿಯಾಗಿ ನಿರ್ವಹಿಸಬೇಕಿದೆ ಅಲ್ಲವೇ? ನಿಮಗೆ ಒಂದು ಉತ್ತಮ ಸ್ಕ್ರಿಪ್ ಬೇಕು. ಅದೇ ರೀತಿ ಈ ಎಲ್ಲ ದೊಡ್ಡ ಹೆಸರುಗಳು ಒಟ್ಟಾಗಿ ಬಂದು ಮೈದಾನದಲ್ಲಿ ಸರಿಯಾಗಿ ಪ್ರದರ್ಶನ ನೀಡಬೇಕಾಗುತ್ತದೆ. ರೋಹಿತ್ ಶರ್ಮ ಕೇವಲ ಒಂದು ಶತಕ ಬಾರಿಸಿದರು ಮತ್ತು ಮುಂಬೈ ಕೂಡ ಸೋತಿತು. ಉಳಿದ ಪ್ರದರ್ಶನಗಳು ಎಲ್ಲಿ? ಎಂದು ಕ್ರಿಕ್​ಬುಜ್​ ಜತೆ ಮಾತನಾಡುವಾಗ ಸೆಹ್ವಾಗ್ ಪ್ರಶ್ನಿಸಿದರು.

ಇನ್ನು ಇಶಾನ್ ಕಿಶನ್ ಇಡೀ ಸೀಸನ್​ನಲ್ಲಿ ಆಡಿದರು ಮತ್ತು ಅವರು ಪವರ್​ಪ್ಲೇ ಮೀರಿ ಉಳಿಯಲು ಸಾಧ್ಯವಾಗಲೇ ಇಲ್ಲ. ಸದ್ಯ ಮುಂಬೈಗೆ ಕೇವಲ ಎರಡು ಹೆಸರುಗಳು ಉಳಿಸಿಕೊಳ್ಳುವುದು ಉತ್ತಮ ಎಂದು ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ವೀರೂ ಸೂಚಿಸಿದರು.

ಮತ್ತೊಬ್ಬ ಮಾಜಿ ಭಾರತೀಯ ಬ್ಯಾಟರ್ ಮನೋಜ್ ತಿವಾರಿ ಕೂಡ ಸೆಹ್ವಾಗ್ ಅವರ ಹೇಳಿಕೆಯನ್ನು ಬೆಂಬಲಿಸಿದರು. ಮುಂಬೈ ತಂಡ ಬುಮ್ರಾ ಮತ್ತು ಸೂರ್ಯಕುಮಾರ್​ರನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದರು. ಮುಂದಿನ ಸೀಸನ್​ನಲ್ಲಿ ಇಬ್ಬರಲ್ಲಿ ಒಬ್ಬರನ್ನು ನಾಯಕನನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು. ಟಿಮ್ ಡೇವಿಡ್ ಸೇರಿದಂತೆ ಯಾವುದೇ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳದಂತೆ ಸಲಹೆ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net