ಈ ವಿಚಾರದಲ್ಲಿ ಧೋನಿಯದ್ದು ಬರೀ ನಾಟಕ! RCB ಪಂದ್ಯಕ್ಕೂ ಮುನ್ನ ಶಾಕಿಂಗ್​ ಹೇಳಿಕೆ ಕೊಟ್ಟ ಆಸಿಸ್​ ಮಾಜಿ ಕ್ರಿಕೆಟಿಗ

MS Dhoni
Published on

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಕುತೂಹಲಕಾರಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್‌ಗೆ ಹೋಗಲು ಸಿಎಸ್‌ಕೆ ತನ್ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತಮ್ಮ ಅನುಭವವನ್ನೆಲ್ಲ ಬಳಸಿ ಹಳದಿ ಆರ್ಮಿಯನ್ನು ಗೆಲ್ಲಿಸಲು ಮಹಿ ಹವಣಿಸುತ್ತಿದ್ದಾರೆ.

ರುತುರಾಜ್ ಗಾಯಕ್ವಾಡ್ ಅವರು ಧೋನಿಗೆ ಬೆಂಬಲವಾಗಿ ನಿಲ್ಲುವ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲು ಸಿಎಸ್​ಕೆ ಹೊಸ ನಾಯಕ ಸಿದ್ಧರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಕೊನೆಯಲ್ಲಿ ಬ್ಯಾಟಿಂಗ್​ಗೆ ಇಳಿದು ಅಬ್ಬರಿಸಿರುವ ಧೋನಿ, ಪ್ಲೇಆಫ್​ಗೆ ಹೋಗಲು ಗೆಲ್ಲಲೇಬೇಕಾದ ಅನಿವಾರ್ಯತೆ ಇರುವ ಕಾರಣ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೊಂಚ ಮುಂಚೆಯೇ ಕ್ರೀಸ್​ಗೆ ಇಳಿಯುವ ಸಾಧ್ಯತೆ ಇದೆ. ಇದರ ನಡುವೆ ಆಸೀಸ್ ಲೆಜೆಂಡರಿ ಕ್ರಿಕೆಟಿಗ ಮೈಕ್ ಹಸ್ಸಿ ಅವರು ಧೋನಿ ಕುರಿತು ಶಾಕಿಂಗ್​ ಕಾಮೆಂಟ್​ ಮಾಡಿದ್ದಾರೆ.

ಈ ಒಂದು ವಿಚಾರದಲ್ಲಿ ಧೋನಿ ಅವರು ತುಂಬಾ ನಾಟಕವಾಡುತ್ತಿದ್ದಾರೆ. ಅದರ ಬಗ್ಗೆ ಮಹಿಯೇ ಸ್ಪಷ್ಟನೆ ನೀಡಬೇಕು ಎಂದು ಮೈಕ್​ ಹಸ್ಸಿ ಹೇಳಿದ್ದಾರೆ. ಅಷ್ಟಕ್ಕೂ ಮೈಕ್​ ಹಸ್ಸಿ ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ, ಧೋನಿ ಅವರ ನಿವೃತ್ತಿಯ ಬಗ್ಗೆ. ನಿವೃತ್ತಿ ವಿಚಾರದಲ್ಲಿ ಧೋನಿಯ ವರ್ತನೆಯನ್ನು ಹಸ್ಸಿ ಅಣಕಿಸಿದ್ದಾರೆ.

ಧೋನಿ ಅವರು ನಿವೃತ್ತಿಯ ನಿರ್ಧಾರ ಮಾಡದೆ ನಾಟಕವಾಡುತ್ತಿದ್ದಾರೆ. ಇನ್ನು ಕೆಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಧೋನಿಯೇ ಹೇಳಿದ್ದಾರೆ. ಅವರ ವರ್ತನೆ ನೋಡಿದರೆ ಈಗ ನಿವೃತ್ತಿ ಘೋಷಿಸದೇ ಇರಬಹುದು ಎಂದು ಮೈಕ್​ ಹಸ್ಸಿ ಹೇಳಿದ್ದಾರೆ. ತಕ್ಷಣವೇ ಏನನ್ನೂ ಬಹಿರಂಗಪಡಿಸುವ ಅಭ್ಯಾಸ ಧೋನಿಗಿಲ್ಲ. ರಹಸ್ಯವನ್ನು ಇಟ್ಟುಕೊಳ್ಳುವುದು ಧೋನಿ ಅವರಿಗೆ ಸಾಮಾನ್ಯ ಎಂದು ಮೈಕ್​ ಹಸ್ಸಿ ಹೇಳಿದರು.

ಧೋನಿ ಇನ್ನೂ ಉತ್ತಮವಾಗಿ ಆಡುತ್ತಿದ್ದಾರೆ. ಈ ಸೀಸನ್​ನಲ್ಲಿ ಧೋನಿ ಬ್ಯಾಟ್ ಘರ್ಜಿಸುತ್ತಿದೆ. ಅವಕಾಶ ಸಿಕ್ಕಾಗಲೆಲ್ಲ ಅಖಾಡಕ್ಕಿಳಿದು ಭರ್ಜರಿ ಸಿಕ್ಸರ್ ಬಾರಿಸುತ್ತಾರೆ. ಕಳೆದ ಐಪಿಎಲ್‌ನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದ ಧೋನಿ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಆದಾಗ್ಯೂ, ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಧೋನಿ ಆಡುತ್ತಿರುವ ರೀತಿ ನೋಡಿದರೆ ಇನ್ನು ಕೆಲವು ವರ್ಷಗಳ ಕಾಲ ಅವರು ತಮ್ಮ ವೃತ್ತಿಜೀವನವನ್ನು ಸುಲಭವಾಗಿ ಮುಂದುವರಿಸುತ್ತಾರೆ ಎಂದು ತೋರುತ್ತದೆ. ಆದರೆ ಈಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಹಿ ನಿವೃತ್ತಿಯ ಬಗ್ಗೆ ಯೋಚಿಸಿ ನಿರ್ಧಾರ ಪ್ರಕಟಿಸಬೇಕು. ಆದರೆ ಅವರು ಏನನ್ನೂ ಹೇಳುವುದಿಲ್ಲ. ಅವರು ಎಲ್ಲದರ ಸುತ್ತ ನಾಟಕವನ್ನು ರಚಿಸಲು ಇಷ್ಟಪಡುತ್ತಾರೆ. ಅವರ ವರ್ತನೆಯನ್ನು ನೋಡಿದರೆ ಈಗಲೇ ಆಟಕ್ಕೆ ವಿದಾಯ ಹೇಳಲು ಅನಿಸುತ್ತಿಲ್ಲ ಎಂದು ಹಸ್ಸಿ ಸ್ಪಷ್ಟಪಡಿಸಿದ್ದಾರೆ.

ನಿವೃತ್ತಿಯ ವಿಚಾರದಲ್ಲಿ ಧೋನಿ ನಾಟಕ ಆಡುತ್ತಿದ್ದಾರೆ ಎಂಬ ಮೈಕ್ ಹಸ್ಸಿ ಅವರ ಕಾಮೆಂಟ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net