2ನೇ ಹೆಂಡ್ತಿಯಾಗಲು ರೆಡಿ ಎಂದ ನಟಿಗೆ ಶಮಿಯ ಮಾಜಿ ಪತ್ನಿ ಹಸೀನಾ ಕೊಟ್ಟ ಉತ್ತರವಿದು…

Mohammad Shami
Published on

ನವದೆಹಲಿ: ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್​ ಪಡೆಯುವ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ ಮೊಹಮ್ಮದ್​ ಶಮಿ ಟೀಮ್​ ಇಂಡಿಯಾದ ನಿರ್ಣಾಯಕ ಬೌಲರ್​ ಎನಿಸಿಕೊಂಡಿದ್ದಾರೆ. ನ.02 ರಂದು ಲಂಕಾ ವಿರುದ್ಧ ಕೇವಲ 18 ರನ್​ಗೆ 5 ವಿಕೆಟ್​ ಪಡೆದಿದ್ದರು. ಇದರಿಂದ ಪ್ರಭಾವಿತರಾಗಿದ್ದ ನಟಿಯೊಬ್ಬರು ಶಮಿಗೆ ಮದುವೆ ಆಫರ್​ ನೀಡಿದ್ದರು. ಇದೀಗ ಶಮಿ ಅವರ ಮಾಜಿ ಪತ್ನಿ ಹಸಿನಾ ಜಹಾನ್​ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮದುವೆ ಆಫರ್​ ಕೊಟ್ಟಿದ್ಯಾರು?

ವಿಶ್ವಕಪ್​ನಲ್ಲಿ ಶಮಿಯ ಗಮನಾರ್ಹ ಸಾಧನೆಯಿಂದ ಪ್ರಭಾವಿತರಾಗಿರುವ ಬಾಲಿವುಡ್​ ನಟಿ ಪಾಯಲ್​ ಘೋಷ್​, ಮೊಹಮ್ಮದ್​ ಶಮಿಗೆ ಮದುವೆ ಆಫರ್​ ನೀಡಿದ್ದರು. ಆದರೆ, ಒಂದು ಷರತ್ತನ್ನು ಸಹ ಹಾಕಿದ್ದರು. ಅಂದಹಾಗೆ ಪಾಯಲ್​ ಘೋಷ್​ ಅವರು 2009ರಲ್ಲಿ ತೆರೆಕಂಡ ಮಂಚು ಮನೋಜ್​ ಅಭಿನಯದ ಪ್ರಣಯಂ ಸಿನಿಮಾದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. ಜೂ. ಎನ್​ಟಿಆರ್​ ಅಭಿನಯದ ಊಸರವಳ್ಳಿ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ. ನಾನು ಶಮಿ ಅವರನ್ನು ಎರಡನೇ ವಿವಾಹವಾಗಲು ರೆಡಿಯಾಗಿದ್ದೇನೆ. ಆದರೆ, ಒಂದು ಷರತ್ತು. ಅದೇನೆಂದರೆ, ಶಮಿ ಅವರು ತಮ್ಮ ಇಂಗ್ಲಿಷ್​ ಮಾತನಾಡುವ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕು. ಇದಕ್ಕೆ ಓಕೆ ಅಂದರೆ, ನನಗೂ ಓಕೆ ಎಂದು ಎಕ್ಸ್​ (ಈ ಹಿಂದೆ ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. ಪಾಯಲ್​ ಘೋಷ್​ ಮಾಡಿದ್ದ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿ, 93 ಸಾವಿರ ಮಂದಿ ವೀಕ್ಷಣೆ ಮಾಡಿದ್ದರು. ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, 500ಕ್ಕೂ ಅಧಿಕ ಮಂದಿ ಕಾಮೆಂಟ್​ಗಳನ್ನು ಮಾಡಿದ್ದರು.

ಮಾಜಿ ಪತ್ನಿ ಪ್ರತಿಕ್ರಿಯೆ ಏನು?

ಪಾಯಲ್​ ಘೋಷ್​ ಹೇಳಿಕೆಗೆ ಇದೀಗ ಮಾಧ್ಯಮ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಹಸಿನಾ, ಸೆಲೆಬ್ರಿಟಿಗಳಿಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ರೀತಿಯ ಆಫರ್​ ನೀಡುವುದು ಹೊಸತೇನಲ್ಲ. ಇದೆಲ್ಲವು ತುಂಬಾನೇ ಸಾಮಾನ್ಯ. ಇಂತಹ ವಿಚಾರಗಳ ಬಗ್ಗೆ ಕಾಮೆಂಟ್​ ಮಾಡಲು ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ.

ಅಂದಹಾಗೆ ಮೊಹಮ್ಮದ್​ ಶಮಿ ಈಗಾಗಲೇ ಹಸಿನಾ ಜಹಾನ್​ ಎಂಬುವರನ್ನು ಮದುವೆ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಕೌಟುಂಬಿಕ ಕಲಹಗಳಿಂದಾಗಿ ಶಮಿ ಮತ್ತು ಜಹಾನ್​ ಬೇರೆ ಬೇರೆ ವಾಸಿಸುತ್ತಿದ್ದಾರೆ. ಜಹಾನ್​ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.

ಶಮಿ ವಿರುದ್ಧ ಜಹಾನ್​, ಜಾಧವಪುರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್​ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್​, ಮಾಜಿ ಪತಿಯ ಕಾಲ್​ ರೆಕಾರ್ಡಿಂಗ್ಸ್​ ಸಹ ಶೇರ್​ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್​ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್​ ಬೌಲರ್​ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net