ಹಾರ್ದಿಕ್​ ಪಾಂಡ್ಯ ಅವರೇ ಇಷ್ಟೊಂದು ಓವರ್​ ಆ್ಯಕ್ಷನ್ ಬೇಡ; ಇದನೆಲ್ಲ ಡ್ರೆಸ್ಸಿಂಗ್ ರೂಮ್​ನಲ್ಲಿ ಇಟ್ಕೊಳ್ಳಿ!

Hardik Pandya
Published on

ಜೈಪುರ: ಜೈಪುರದ ಸವಾಯಿ ಮಾನ್ಸಿಂಗ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್​ 22) ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೀನಾಯವಾಗಿ ಸೋತಿತು. ಈ ಸೀಸನ್​ನಲ್ಲಿ ಮುಂಬೈ ತಂಡಕ್ಕೆ ಇದು ಐದನೇ ಸೋಲಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಟ್ರೋಲ್​ಗೆ ಒಳಗಾಗಿರುವ ಹಾರ್ದಿಕ್ ಪಾಂಡ್ಯ, ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ಮಾಡಿದ ತನ್ನ ಎಡವಟ್ಟುಗಳಿಂದಾಗಿ ಹೆಚ್ಚು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಓವರ್ ಆ್ಯಕ್ಷನ್​ಗಳನ್ನು ಕಡಿಮೆ ಮಾಡಿ ಎಂದು ನೆಟ್ಟಿಗರು ಪಾಂಡ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆರ್‌ಆರ್ ತಂಡದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುತ್ತಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಡಗೌಟ್‌ನಲ್ಲಿ ತಮ್ಮ ಬ್ಯಾಟಿಂಗ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬೌಂಡರಿ ಲೈನ್ ಪಕ್ಕದಲ್ಲಿ ಪುಶ್​ ಅಪ್​​ ಮಾಡುವ ಮೂಲಕ ತಯಾರಿ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಪಾಂಡ್ಯ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ಇಂತಹ ಕೆಲಸಗಳನ್ನು ಡ್ರೆಸ್ಸಿಂಗ್ ರೂಂನಲ್ಲಿ ಮಾಡಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಬ್ಯಾಟಿಂಗ್ ಮಾಡುವ ಮುನ್ನ ಪಾಂಡ್ಯ ಅವರು ಇಷ್ಟು ಓವರ್ ಆ್ಯಕ್ಷನ್ ಮಾಡಿದರು ಕೂಡ ಬ್ಯಾಟಿಂಗ್​ನಲ್ಲಿ ಮಿಂಚಲಿಲ್ಲ. ಹತ್ತು ಎಸೆತಗಳನ್ನು ಆಡಿದ ಪಾಂಡ್ಯ ಕೇವಲ ಹತ್ತು ರನ್ ಗಳಿಸಿ ಔಟಾದರು ಎಂದು ಟೀಕಿಸುತ್ತಿದ್ದಾರೆ.

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಆರಂಭಿಕರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ವೈಫಲ್ಯದ ಹೊರತಾಗಿಯೂ ಒನ್​ ಡೌನ್​ನಲ್ಲಿ ಬಂದ ಸೂರ್ಯಕುಮಾರ್ ಯಾದವ್ ಹೆಚ್ಚು ರನ್ ಗಳಿಸದೆ ಔಟಾದ ಕಾರಣ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಆದರೆ, ತಿಲಕ್ ವರ್ಮಾ 45 ಎಸೆತಗಳಲ್ಲಿ 65 ಮತ್ತು ನೇಹಾಲ್ 24 ಎಸೆತಗಳಲ್ಲಿ 49 ರನ್ ಗಳಿಸಿ ಉತ್ತಮ ರನ್​ ತಂದುಕೊಟ್ಟರು. ಅಂತಿಮವಾಗಿ ಟಿಮ್ ಡೇವಿಡ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ರನ್​ ಗಳಿಸುವಲ್ಲಿ ವಿಫಲರಾದರು. ರಾಜಸ್ಥಾನದ ಬೌಲರ್‌ಗಳ ಪೈಕಿ ಸಂದೀಪ್ ಶರ್ಮಾ 5 ವಿಕೆಟ್ ಕಬಳಿಸಿ ಮುಂಬೈ ಇಂಡಿಯನ್ಸ್ ತಂಡವನ್ನು ಕಾಡಿದರು.

180 ರನ್​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ರಾಜಸ್ತಾನ ಕೇವಲ ಒಂದು ವಿಕೆಟ್ ಕಳೆದುಕೊಂಡು 18.4 ಓವರ್​ಗಳಲ್ಲಿ 183 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 60 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ ರಾಜಸ್ಥಾನಕ್ಕೆ ಜಯ ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್ 38 (ಔಟಾಗದೆ) ಮತ್ತು ಆರಂಭಿಕ ಜೋಸ್ ಬಟ್ಲರ್ 35 ರನ್​ ಗಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net