

ಸಿಡ್ನಿ: ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಿಂದ ಹಾರ್ದಿಕ್ ಪಾಂಡ್ಯಾಗೆ ವಿಶ್ರಾಂತಿ ನೀಡಲಾಗುತ್ತದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿತ್ತು. ಇದೀಗ ಈ ವಿಚಾರವಾಗಿ ಟೀಂ ಇಂಡಿಯಾ ಬೌಲಿಂಗ್ ಕೋಚ್ ಸ್ಪಷ್ಟನೆ ನೀಡಿದ್ದಾರೆ.
ಟಿ-20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಜವಾಬ್ದಾರಿಯುತವಾಗಿ ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯಾ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾಂಡ್ಯಾ ಈ ಪಂದ್ಯದಲ್ಲಿ 40 ರನ್ ಗಳಿಸಿ, ಬೌಲಿಂಗ್ನಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು. ಈ ಪಂದ್ಯದಿಂದ ಪಾಂಡ್ಯಾ ಹೆಚ್ಚು ಬಳಲಿದಂತೆ ಕಂಡಿದ್ದರು. ಹೀಗಾಗಿ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯಾಗೆ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಸುದ್ದಿ ಹರಿದಾಡಿತ್ತು.
ಇದೀಗ ಹಾರ್ದಿಕ್ ಫಿಟ್ನೆಸ್ ಹಾಗೂ ವಿಶ್ರಾಂತಿಯ ಬಗ್ಗೆ ಮಾತನಾಡಿರುವ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, 'ಹಾರ್ದಿಕ್ ಕ್ಷೇಮವಾಗಿದ್ದಾರೆ. ಮುಂದಿನ ಪಂದ್ಯ ಆಡುವಷ್ಟು ಫಿಟ್ ಆಗಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯವಿಲ್ಲ. ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಂಡ್ಯಾ ಇನ್ನಿಂಗ್ಸ್ ನಿರ್ಣಾಯಕವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)