ನಾನು ಇದ್ದಿದ್ರೆ ಆತನಿಗೆ... ! ಸಿರಾಜ್​-ಟ್ರಾವಿಸ್​ ವಿವಾದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಕಿಡಿ | Travis Head

ವಿಜಯವಾಣಿ - 2024-12-07T213856.875
Published on

ನವದೆಹಲಿ: ನಿನ್ನೆ (ಡಿ.07) ಅಡಿಲೈಡ್​ ಓವಲ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್​​ನ ಎರಡನೇ ಇನ್ನಿಂಗ್ಸ್​ನಲ್ಲಿ​ ಟೀಮ್ ಇಂಡಿಯಾದ ಬೌಲರ್​ಗಳು, ಆಸ್ಟ್ರೇಲಿಯಾದ ಬ್ಯಾಟರ್​ಗಳ ಬೆವರಿಳಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾದರು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಟ್ರಾವಿಸ್​ ಹೆಡ್ (Travis Head)​ ಮತ್ತು ಮೊಹಮ್ಮದ್​ ಸಿರಾಜ್ (Siraj)​ ನಡುವೆ ನಡೆದ ಮಾತಿನ ಚಕಮಕಿ ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿರಾಜ್​ಗೆ ಅವಾಚ್ಯ ಪದಗಳಿಂದ ನಿಂದಿಸಿದ ಹೆಡ್​, ನಾನು ಆತನನ್ನು ಹೊಗಳಿದರೂ ಸಹ ನನಗೆ ಅವನಿಂದ ಕೇಳಿಬಂದಿದ್ದು, ಕೇವಲ ಕೆಟ್ಟ ಪದ ಎಂದು ಪತ್ರಕರ್ತರ ಮುಂದೆ ಹೇಳಿರುವುದು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸುಳ್ಳು ಹೇಳಿಕೆ

82ನೇ ಓವರ್​ ಬೌಲಿಂಗ್ ಮಾಡುತ್ತಿದ್ದ ಸಿರಾಜ್​, ಸ್ಟ್ರೈಕ್​ನಲ್ಲಿದ್ದ ಟ್ರಾವಿಸ್​ ಹೆಡ್​ರನ್ನು ಕ್ಲೀನ್​ ಬೋಲ್ಡ್​ ಮಾಡುತ್ತಾರೆ. ವಿಕೆಟ್ ಪಡೆದ ಸಂತಸದಲ್ಲಿ ಹೆಡ್​ರನ್ನೇ ನೋಡುತ ಕಿಚ್ಚಾಯಿಸಿದ ಸಿರಾಜ್​ಗೆ ಟ್ರಾವಿಸ್​ ಎರಡು-ಮೂರು ಪದಗಳಿಂದ ಅವಾಚ್ಯ ಪದಗಳನ್ನು ಬಳಸಿದರು ಎಂಬ ವಿಷಯ ನೋಡುಗರಿಗೆ ಸ್ಪಷ್ಟವಾಗಿ ತಿಳಿಯಿತು. ಇದೇ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಟ್ರಾವಿಸ್​ ಹೆಡ್​ ಮುಂದಿಟ್ಟ ಪತ್ರಕರ್ತರು, ನಿಮ್ಮ ಮತ್ತು ಸಿರಾಜ್​ ನಡುವೆ ನಡೆದಿದ್ದೇನು ಎಂದು ನೇರವಾಗಿ ಪ್ರಶ್ನಿಸಿದರು. ಆದರೆ, ಇದಕ್ಕೆ ಹೆಡ್​ರಿಂದ ಬಂದ ಉತ್ತರ ಮಾತ್ರ ಯಾರಿಂದಲೂ ಒಪ್ಪಲು ಸಾಧ್ಯವಾಗಿಲ್ಲ. ಸದ್ಯ ಇದೇ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಕ್ರಿಕೆಟ್ ಒಂದು ಜೆಂಟಲ್​ಮ್ಯಾನ್​ ಆಟ

'ನಾನು ಸಿರಾಜ್​ ನೀವು ಚೆನ್ನಾಗಿ ಬೌಲ್ ಮಾಡಿದ್ದೀರಿ ಎಂದಿದ್ದಕ್ಕೆ ಸಿರಾಜ್​ ಮುಖಭಾವನೆ ನನಗೆ ಸರಿ ಅನಿಸಲಿಲ್ಲ' ಎಂದು ಟ್ರಾವಿಸ್​ ಪತ್ರಕರ್ತರ ಮುಂದ ಹೇಳಿದರು. ಆದರೆ, ಈ ಬಗ್ಗೆ ಸಿರಾಜ್​ರನ್ನು ಕೇಳಿದಾಗ, 'ಆತ ನನಗೆ ಕೆಟ್ಟದಾಗಿ ಬೈದು, ಈಗ ಮಾಧ್ಯಮದ ಮುಂದೆ ಕೂತು ಸುಳ್ಳು ಹೇಳಿದ್ದಾರೆ. ಕ್ರಿಕೆಟ್ ಒಂದು ಜೆಂಟಲ್​ಮ್ಯಾನ್​ ಆಟ. ಹೆಡ್​ ಎಲ್ಲಿಯೂ ನನಗೆ ಚೆನ್ನಾಗಿ ಬೌಲಿಂಗ್ ಮಾಡಿದ್ದೀರಾ ಎಂದು ಹೇಳಿಲ್ಲ, ಅದನ್ನು ನೀವೇ ಖುದ್ದಾಗಿ ವಿಡಿಯೋದಲ್ಲಿ ವೀಕ್ಷಿಸಬಹುದು' ಎಂದು ಸಿರಾಜ್ ಹೇಳಿದ್ದಾರೆ. ಇನ್ನು ಈ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್​, ಆಸ್ಟ್ರೇಲಿಯಾದವರಿಗೆ ಇದೊಂದು ಚಾಳಿಯಾಗಿಬಿಟ್ಟಿದೆ ಎಂದು ಕಿಡಿಕಾರಿದ್ದಾರೆ.

ನಾನು ಇದ್ದಿದ್ರೆ

"ಆಸ್ಟ್ರೇಲಿಯನ್ನರು ಸುಳ್ಳು ಹೇಳುವ ಮತ್ತು ಆಟಗಾರರನ್ನು ನಿಂದಿಸುವ ಅಭ್ಯಾಸವನ್ನು ಈ ಹಿಂದಿನಿಂದಲೂ ಹೊಂದಿದ್ದಾರೆ. ಕಾಂಗರೂ ಪಡೆಯವರು ಆಟಗಾರನನ್ನು ನಿಂದಿಸಿ, ಸುಳ್ಳು ಹೇಳುತ್ತಿರುವುದು ಇದೇ ಮೊದಲಲ್ಲ. ಹೆಡ್ ತನ್ನನ್ನು ತಾನು ಸರಿ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅಕಸ್ಮಾತ್​ ನಾನು ಟೀಂ ಇಂಡಿಯಾ ಪರವಾಗಿ ಮೈದಾನದಲ್ಲಿ ಇದ್ದಿದ್ರೆ ಖಂಡಿತ ಹೇಗೆ ಬೌಲಿಂಗ್ ಮಾಡಬೇಕೆಂದು ಆತನಿಗೆ ಸರಿಯಾಗಿ ತೋರಿಸಿಕೊಡುತ್ತಿದ್ದೆ" ಎಂದು ಬಜ್ಜಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net