ಧೋನಿ ವಿಷಯದಲ್ಲಿ ಹರ್ಭಜನ್​ ಹೇಳಿರುವುದು ಶುದ್ಧ ಸುಳ್ಳು! ಕಡೆಗೂ ವದಂತಿ ಬಗ್ಗೆ ಮೌನಮುರಿದ ಕೋಚ್​

harbhajan singh lied
Published on

ನವದೆಹಲಿ: ಕಳೆದ ಐಪಿಎಲ್ 17ನೇ ಆವೃತ್ತಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಸಿಎಸ್​ಕೆ (CSK) ನಡುವಿನ ಲೀಗ್​ ಹಂತದ ಕೊನೆಯ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿ ಪ್ಲೇಆಫ್​​ ಹಂತಕ್ಕೇರಿದ್ದು ಪ್ರತಿಯೊಬ್ಬ ಕ್ರಿಕೆಟ್​ ಪ್ರೇಮಿಗೂ ಗೊತ್ತೇ ಇದೆ. ಈ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್​ ಮಾಜಿ ಕ್ಯಾಪ್ಟನ್ ಎಂ.ಎಸ್​. ಧೋನಿ (MS Dhoni), ಅಂದು ಮೈದಾನದಲ್ಲಿ ಆರ್​ಸಿಬಿ ಕೊಟ್ಟಿದ್ದ ಗುರಿಯನ್ನು ತಲುಪುವ ವೇಳೆ ತಮ್ಮ ವಿಕೆಟ್ ಕಳೆದುಕೊಂಡು ಭಾರೀ ಬೇಸರದಿಂದ ಪೆವಿಲಿಯನ್​ನತ್ತ ಸಾಗಿದ್ದರು. ಇದೇ ವಿಷಯವನ್ನು ಮುನ್ನೆಲೆಗೆ ತಂದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ (Harbhajan Singh), ಕೇವಲ ಹಸ್ತಲಾಘವ ಮಾಡದಿರುವುದು ಮಾತ್ರವಲ್ಲ ಅಂದು ಧೋನಿ, ಟಿವಿಯನ್ನು ಸಹ ಒಡೆದು ಹಾಕಿದ್ದರು ಎಂಬ ಶಾಕಿಂಗ್​ ಹೇಳಿಕೆ ನೀಡಿದ್ದರು. ಸದ್ಯ ಈ ವಿಷಯ ಇದೀಗ ತೀವ್ರ ಚರ್ಚೆ ಹುಟ್ಟುಹಾಕಿದ್ದು, 'ಕ್ಯಾಪ್ಟನ್ ಕೂಲ್' ಬಗ್ಗೆ ಬೇಸರ ಮೂಡುವಂತೆ ಮಾಡಿದೆ.

ಅಸಲಿಗೆ ವೈರಲ್ ಆದ ವಿಷಯವೇನು?

ಹಲವು ತಿಂಗಳುಗಳ ಬಳಿಕ ವಿಡಿಯೋವೊಂದು ವೈರಲ್​ ಆಗಿದ್ದು, ಅದರಲ್ಲಿ ಪತ್ರಕರ್ತರೊಬ್ಬರು ಧೋನಿ ಕೋಪದಿಂದ ಟಿವಿ ಹೊಡೆದು ಹಾಕಿದ್ದರು ಎಂದು ಹೇಳಿಕೊಂಡಿದ್ದರು. ನಾನು ವಿಶೇಷವಾದ ವಿಚಾರವೊಂದರ ಬಗ್ಗೆ ತಿಳಿದುಕೊಂಡಿದ್ದೇನೆ. ಧೋನಿ ಏಕೆ ಆರ್​ಸಿಬಿ ಆಟಗಾರರಿಗೆ ಶೇಕ್​ ಹ್ಯಾಂಡ್​ ಮಾಡಲಿಲ್ಲ ಎಂದು ನಾನು ಭಜ್ಜಿ ( ಹರ್ಭಜನ್ ) ಅವರ ಬಳಿ ಕೇಳಿದೆ. ಆಗ ಅವರು ಅಂದು ಧೋನಿ ಕೇವಲ ಹಸ್ತಲಾಘವ ಮಾಡದಿರುವುದು ಮಾತ್ರವಲ್ಲ, ಟಿವಿಯನ್ನು ಸಹ ಒಡೆದು ಹಾಕಿದ್ದರು. ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಕಳೆದುಕೊಂಡಿದ್ದಕ್ಕಾಗಿ ಧೋನಿ ತುಂಬಾ ಕೋಪಗೊಂಡಿದ್ದರು ಎಂದು ನನಗೆ ಹೇಳಿದರು ಎಂದು ಪತ್ರಕರ್ತ ತಿಳಿಸಿದ್ದರು. ಈ ವಿಡಿಯೋ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್​ ಆಗಿದ್ದು, ಧೋನಿ ಅಭಿಮಾನಿಗಳನ್ನು ಕೆರಳಿಸಿತು.

CSK ಫೀಲ್ಡಿಂಗ್ ಕೋಚ್​ ಟಾಮಿ ಸಿಮ್ಸೆಕ್ ಸ್ಪಷ್ಟನೆ

ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಕೋಚ್ ಆಗಿರುವ ಟಾಮಿ ಸಿಮ್ಸೆಕ್ ಕಡೆಗೂ ಈ ವದಂತಿಗಳ ಕುರಿತು ಮೌನ ಮುರಿದಿದ್ದು, "ಅಂದು ಧೋನಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಟಿವಿ ಅನ್ನು ಒಡೆದಿಲ್ಲ. ಇದು ಸಂಪೂರ್ಣ ಕಟ್ಟುಕಥೆ. ಮಹೇಂದ್ರ ಸಿಂಗ್ ಧೋನಿ ಎಂದಿಗೂ ಆ ರೀತಿ ನಡೆದುಕೊಳ್ಳುವವರಲ್ಲ. ಅಂತಹ ವ್ಯಕ್ತಿತ್ವವು ಅವರದ್ದಲ್ಲ. ಅಸಲಿಗೆ ಅವರು ತುಂಬ ಬೇಸರಕ್ಕೊಳಗಾಗಿದ್ದು ನಿಜ. ಆದ್ರೆ, ಯಾವ ವಸ್ತುವನ್ನು ಕೂಡ ಒಡೆದಿಲ್ಲ. ಇದು ಶುದ್ಧ ಸುಳ್ಳು. ಧೋನಿ ವಿಷಯದಲ್ಲಿ ಹರ್ಭಜನ್ ಸಿಂಗ್ ಸುಳ್ಳು ಹೇಳಿದ್ದಾರೆ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net