ಕೊಹ್ಲಿಗೆ ಜನ್ಮದಿನದ ಸಂಭ್ರಮ; ಅಭಿಮಾನಿಗಳ ಮನಗೆದ್ದ ದಿನೇಶ್​ ಕಾರ್ತಿಕ್ ಮಾಡಿದ ಟ್ವೀಟ್

Kohli
Published on

ಮೆಲ್ಬೋರ್ನ್​: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿಗೆ ಇಂದು (ನ.05) ಜನ್ಮದಿನದ ಸಂಭ್ರಮ. ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು, ತಂಡದ ಸಹ ಆಟಗಾರರು, ಹಿರಿಯ ಆಟಗಾರರೆಲ್ಲಾ ಕೊಹ್ಲಿಯನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿ, ಶುಭಾಶಯ ತಿಳಿಸಿದ್ದಾರೆ. ಇದೀಗ ತಂಡದ ಸಹ ಆಟಗಾರ ದಿನೇಶ್ ಕಾರ್ತಿಕ್ ಕೊಹ್ಲಿ ಬಗ್ಗೆ ಟ್ವೀಟ್ ಮಾಡಿರುವ ಮಾತುಗಳು ಅಭಿಮಾನಿಗಳ ಮನ ಗೆದ್ದಿವೆ.

ಕೊಹ್ಲಿಯೊಂದಿಗಿನ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿರುವ ದಿನೇಶ್ ಕಾರ್ತಿಕ್, 'ಯಾರೂ ನಂಬದಿದ್ದಾಗ ನನ್ನನ್ನು ನಂಬುವ ಏಕೈಕ ವ್ಯಕ್ತಿ'ಎಂದು ಕೊಹ್ಲಿಯನ್ನು ವರ್ಣಿಸಿ, ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ಸ್ನೇಹಿತರು. ದಿನೇಶ್ ಕಾರ್ತಿಕ್ ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ, ಅವರ ಕೈ ಹಿಡಿದಿದ್ದಾರೆ. 2015ರಲ್ಲಿ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ತಂಡದ ಭಾಗವಾಗಿದ್ದ ಸಂದರ್ಭದಲ್ಲಿ ಕೊಹ್ಲಿ ನಾಯಕತ್ವದಡಿಯಲ್ಲಿ ದಿನೇಶ್ ಕಾರ್ತಿಕ್ ಆಡಿದ್ದರು.

ಇನ್ನೇನು ದಿನೇಶ್​ ಕಾರ್ತಿಕ್ ಕ್ರಿಕೆಟ್ ಬದುಕು ಕೊನೆಯಾಯಿತು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿರುವಾಗಲೇ, ಆರ್​​ಸಿಬಿ ತಂಡದಲ್ಲಿ ಅದ್ಭುತ ನಿರ್ವಹಣೆ ತೋರುವ ಮೂಲಕ ದಿನೇಶ್​ ಕಾರ್ತಿಕ್ ಕಂಬ್ಯಾಕ್ ಮಾಡಿದ್ದರು. ಈ ವೇಳೆ ಕೊಹ್ಲಿ ಕಾರ್ತಿಕ್​ರನ್ನು ಬೆಂಬಲಿಸಿದ್ದರು.

ಸದ್ಯ ಟಿ-20 ವಿಶ್ವಕಪ್​ ನಡೆಯುತ್ತಿರುವ ಕಾರಣ ಆಟಗಾರರೆಲ್ಲಾ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದಾರೆ. ತಂಡದ ಸಹ ಆಟಗಾರರೊಂದಿಗೆ ಕೊಹ್ಲಿ ಮೆಲ್ಬೋರ್ನ್​ನಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net