ಕೊಹ್ಲಿಗೆ ಜನ್ಮದಿನದ ಸಂಭ್ರಮ; 34ನೇ ವಸಂತಕ್ಕೆ ಕಾಲಿಟ್ಟ ವಿರಾಟ್

Happy Birthday virat
Published on

ನವದೆಹಲಿ: ವಿರಾಟ್ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟಿರುವ ಕೊಹ್ಲಿಗೆ ವಿಶ್ವದ ವಿವಿಧೆಡೆಯಿಂದ ಅಭಿಮಾನಿಗಳು, ಹಿರಿಯ ಆಟಗಾರರು, ಸಹ ಕ್ರಿಕೆಟಿಗರೆಲ್ಲರೂ ಶುಭಾಶಯದ ಮಳೆಯನ್ನೇ ಸುರಿಸುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯುತ್ತಿದ್ದು, ಅಲ್ಲಿಯೇ ಕೊಹ್ಲಿ ಜನ್ಮದಿನವನ್ನೂ ಆಚರಿಸಿಕೊಳ್ಳುತ್ತಿದ್ದಾರೆ.

ಆಸ್ಟ್ರೇಲಿಯಾದ ಆಟಗಾರ ಗ್ಲೇನ್ ಮ್ಯಾಕ್ಸ್​​ವೆಲ್ ಕೊಹ್ಲಿ ಶುಭಾಶಯ ತಿಳಿಸಿದ್ದಾರೆ. ಹೌದು, ನನ್ನ ಉತ್ತಮ ಸ್ನೇಹಿತ ವಿರಾಟ್ ಕೊಹ್ಲಿ ಜನ್ಮ ದಿನದ ಶುಭಾಶಯಗಳು. ಇಂದು ನಿಮಗೆ ಅತ್ಉತ್ತಮ ದಿನ ಎಂದು ಭಾವಿಸುತ್ತೇನೆ. ಖಂಡಿತ, ಮೆಸೇಜ್ ಮಾಡುವ ಮೂಲಕ ಮತ್ತೊಮ್ಮೆ ಶುಭಾಶಯ ತಿಳಿಸತ್ತೇನೆ ಎಂದು ಮ್ಯಾಕ್ಸ್​ವೆಲ್ ಹೇಳಿದ್ದಾರೆ.

ಪಾಕಿಸ್ತಾನದ ತಂದ ವೇಗಿ ಶಹನವಾಜ್ ದಹಾನಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿಯೊಂದಿಗಿನ ಫೋಟೋ ಅಪ್ಲೋಡ್ ಮಾಡಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಕ್ರಿಕೆಟ್​​ನ್ನು ಅತ್ಯಂತ ಸುಂದರವಾಗಿಸಿದ ಆಟಗಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ದಿನವನ್ನು ಆಚರಿಸಿ, ಜಗತ್ತನ್ನು ಆಟದ ಮೂಲಕ ರಂಜಿಸುತ್ತಿರಿ ಎಂದು ಹಾರೈಸಿದ್ದಾರೆ.

'ನಮ್ಮ ವಿರಾಟ ರಾಜ' ಎಂದು ಟ್ವೀಟ್ ಮಾಡಿರುವ ಆರ್​​ಸಿಬಿ ತಂಡ, ವಿಶ್ವ ಕ್ರಿಕೆಟ್​ನ ಭಯವಿಲ್ಲದ ಆಟಗಾರ ಎಂದು ಹೇಳಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಜೂಲನ್ ಗೋಸ್ವಾಮಿ ಟ್ವೀಟ್ ಮಾಡಿ, ಅತ್ಯಂತ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಆಟಗಾರನಿಗೆ ಜನ್ಮದಿನದ ಶುಭಾಶಯಗಳು ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ಬ್ಯಾಟ್ ಕಳೆದ ಎರಡು ವರ್ಷಗಳಿಂದ ಮಂಕಾಗಿತ್ತು, ಕೊಹ್ಲಿ ನಿವೃತ್ತಿಗೆ ತೆಗೆದುಕೊಳ್ಳುವುದು ಸೂಕ್ತ ಎಂಬೆಲ್ಲಾ ಟೀಕೆಗಳು ಕೇಳಿಬರುತ್ತಿತ್ತು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕೊಹ್ಲಿ, ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕವೇ ಟೀಕೆಗಳಿಗೆ ಉತ್ತರಿಸಿದ್ದಾರೆ.

ಅತ್ಯಂತ ಸಣ್ಣ ವಯಸ್ಸಿನಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದು ಕೊಹ್ಲಿ, ಜಗತ್ತಿನ ವಿಶ್ವ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಕೊಹ್ಲಿ ಮೈದಾನದಲ್ಲಿ ಘರ್ಜಿಸುವುದು ಇನ್ನಷ್ಟಿದೆ ಎಂದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಹೇಳುತ್ತಾರೆ. ಹೀಗಾಗಿ ಭಯವಿಲ್ಲದ ಆಟಗಾರ ಕೊಹ್ಲಿ ಇನ್ನಷ್ಟು ವರ್ಷ ಮೈದಾನದಲ್ಲಿ ನಮ್ಮನ್ನು ರಂಜಿಸುತ್ತಿರಲಿ ಎಂಬುವುದು ಅಭಿಮಾನಿಗಳ ಹಾರೈಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net