ಶತಕ ಬಾರಿಸಲು ಶ್ರೇಯಸ್​ಗೆ ಸ್ಟ್ರೈಕ್​ ಬಿಟ್ಟು ಕೊಡದಿರಲು ಕಾರಣ ಬಿಚ್ಚಿಟ್ಟ ಶಶಾಂಕ್: ಅಯ್ಯರ್​ ನಿಜಕ್ಕೂ ಗ್ರೇಟ್​! Shashank Singh

Shashank Singh
Published on

Shashank Singh : ಐಪಿಎಲ್ 2025ರ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭವನ್ನು ಕಂಡಿದೆ. ಮಂಗಳವಾರ (ಮಾರ್ಚ್​ 25) ರಾತ್ರಿ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 11 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸ್ವಲ್ಪದರಲ್ಲೇ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. 42 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ 97 ರನ್ ಗಳಿಸಿ ಅಜೇಯರಾಗಿ ಉಳಿದರು.

ವಾಸ್ತವವಾಗಿ, ಅಯ್ಯರ್​ಗೆ ಶತಕ ಗಳಿಸುವ ಅವಕಾಶವಿತ್ತು. ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್, 19 ಓವರ್‌ಗಳ ನಂತರ 220ಕ್ಕೆ 5 ವಿಕೆಟ್​ ಕಳೆದುಕೊಂಡಿತು. ಈ ವೇಳೆ ಶ್ರೇಯಸ್ ಅಯ್ಯರ್ (97) ಮತ್ತು ಶಶಾಂಕ್ ಸಿಂಗ್ (22) ಕ್ರೀಸ್​ನಲ್ಲಿದ್ದರು. ಕೊನೆಯ ಓವರ್ ಅನ್ನು ಸಿರಾಜ್ ಬೌಲ್ ಮಾಡಿದರು. ಆ ಸಮಯದಲ್ಲಿ ಶಶಾಂಕ್​ ಸ್ಟ್ರೈಕ್‌ನಲ್ಲಿದ್ದರು. ಅವರು ಸಿಂಗಲ್ ನೀಡಿದ್ದರೆ, ಶ್ರೇಯಸ್ ಶತಕ ಗಳಿಸಬಹುದಿತ್ತು.

ಆದರೆ, ಶಶಾಂಕ್ ಮೊದಲ ಎಸೆತದಲ್ಲಿ ಒಂದು ಬೌಂಡರಿ ಹೊಡೆದರು. ಎರಡನೇ ಎಸೆತದಲ್ಲಿ ಎರಡು ರನ್ ಗಳಿಸಿದರು. ಅದಾದ ನಂತರ, ಅವರು ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಬೌಂಡರಿ ಬಾರಿಸಿದರು. ಒಂದು ವೈಡ್ ಕೂಡ ಬಿದ್ದ ಕಾರಣ, ಈ ಓವರ್‌ನಲ್ಲಿ ಒಟ್ಟು 23 ರನ್ ಗಳಿಸಿದರು. ಇದರಿಂದಾಗಿ, ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಲವು ಅಭಿಮಾನಿಗಳು ಶಶಾಂಕ್ ಮೇಲೆ ಕೋಪಗೊಂಡರು. ಶಶಾಂಕ್ ಅವರು ಸಿಂಗಲ್ ಹೊಡೆದಿದ್ದರೆ, ಶ್ರೇಯಸ್ ಶತಕ ಬಾರಿಸುತ್ತಿದ್ದರು ಎಂದು ಟೀಕಿಸುತ್ತಿದ್ದಾರೆ.

ಇದೀಗ ಈ ವಿಚಾರವಾಗಿ ಮಾತನಾಡಿರುವ ಶಶಾಂಕ್, ಶ್ರೇಯಸ್ ಅಯ್ಯರ್ ಬಳಿ ಹೋಗಿ ಸ್ಟ್ರೈಕ್ ಬೇಕಾ ಎಂದು ಕೇಳಲು ಬಯಸಿದ್ದೆ. ಆದರೆ, ಶ್ರೇಯಸ್ ಅಯ್ಯರ್ ಅವರೇ ನನ್ನ ಬಳಿ ಬಂದು, ನನ್ನ ಶತಕದ ಬಗ್ಗೆ ಯೋಚಿಸಬೇಡಿ, ಪ್ರತಿ ಚೆಂಡಿನಲ್ಲೂ ಬೌಂಡರಿ ಬಾರಿಸಿ. ಇದು ತಂಡದ ಆಟ. ತಂಡದ ಸ್ಕೋರ್ ಮುಖ್ಯ ಎಂದು ಹೇಳಿದರಂತೆ. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಶಶಾಂಗ್​ ಬಹಿರಂಗಪಡಿಸಿದ್ದಾರೆ.

ಐಪಿಎಲ್​​ನಲ್ಲಿ ಶತಕ ಗಳಿಸುವುದು ಸುಲಭವಲ್ಲ. ಇಂತಹ ಅದ್ಭುತ ಅವಕಾಶ ಬಂದಾಗ ತಂಡಕ್ಕಾಗಿ ನಿಸ್ವಾರ್ಥವಾಗಿರುವುದು ತುಂಬಾ ಕಷ್ಟ. ಆದರೆ, ಶ್ರೇಯಸ್ ಈ ವಿಚಾರದಲ್ಲಿ ತುಂಬಾ ಶ್ರೇಷ್ಠ ಎಂದು ಶಶಾಂಕ್ ಹೊಗಳಿದರು.

ಶಶಾಂಕ್ ಅವರು ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಬಂದಾಗ, ಮೊದಲ ಎಸೆತದಿಂದಲೇ ಹೊಡೆಯಬೇಕು ಮತ್ತು ಮುಕ್ತವಾಗಿ ಆಡಬೇಕೆಂದು ಮೊದಲೇ ಶ್ರೇಯಸ್​ ಅಯ್ಯರ್​ ಹೇಳಿದ್ದರಂತೆ. ಇನ್ನು ಮೊದಲಿನಿಂದಲೂ ತಂಡದ ಆಡಳಿತ ಮಂಡಳಿ ನನಗೆ ತುಂಬಾ ಬೆಂಬಲ ನೀಡುತ್ತಿದೆ. ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ನಾನು ಶಾಟ್‌ಗಳನ್ನು ಆಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಶಶಾಂಕ್ ಹೇಳಿದರು.

ಈ ಪಂದ್ಯದಲ್ಲಿ ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 44 ರನ್ ಗಳಿಸಿ ಅಜೇಯರಾಗುಳಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 243 ರನ್ ಗಳಿಸಿತು. ನಂತರ, ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 232 ರನ್‌ಗಳಿಗೆ ಸೀಮಿತವಾಯಿತು. ಪಂಜಾಬ್ ಕಿಂಗ್ಸ್ 11 ರನ್‌ಗಳಿಂದ ಜಯಗಳಿಸಿತು. ಇನ್ನು ಕೊನೆಯ ಓವರ್‌ನಲ್ಲಿ ಶಶಾಂಕ್ ಸಿಂಗ್ ಗಳಿಸಿದ ರನ್‌ಗಳು ಪಂದ್ಯದ ಕೊನೆಯಲ್ಲಿ ನಿರ್ಣಾಯಕವಾದವು. ಇದರೊಂದಿಗೆ, ಶ್ರೇಯಸ್ ಅಯ್ಯರ್ ಅವರ ನಿರ್ಧಾರಕ್ಕೆ ಎಲ್ಲಾ ಕಡೆಯಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net