

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಹತಾಶೆಯಲ್ಲಿದ್ದಾರೆ. ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಹೀರೋ ಎನಿಸಿಕೊಂಡ ಕ್ರಿಕೆಟಿಗನಿಗೆ ಇದೀಗ ಸಾಕಷ್ಟು ಸವಾಲುಗಳು ಎದುರಾಗಿವೆ. ಸದ್ಯಕ್ಕೆ ಹಾರ್ದಿಕ್ ಖುಷಿಯಾಗಿಲ್ಲ ಎಂಬುದು ಮಾತ್ರ ಸತ್ಯ. ಅದಕ್ಕೆ ಎರಡು ಕಾರಣಗಳಿವೆ. ಅದರಲ್ಲಿ ಒಂದು ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ವಿಚ್ಛೇದನ ಮತ್ತು ಎರಡನೆಯದು ಟೀಮ್ ಇಂಡಿಯಾದ ನಾಯಕತ್ವ ಸಿಗದಿರುವುದು.
ಸದ್ಯಕ್ಕೆ ವಿಚ್ಛೇದನ ವಿಚಾರವನ್ನು ಬದಿಗಿಟ್ಟರೆ, ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾದ ನಾಯಕತ್ವ ಸಿಗದಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐ ಮತ್ತೊಬ್ಬ ಹಿರಿಯ ಆಟಗಾರ ಸೂರ್ಯಕುಮಾರ್ ಯಾದವ್‌ಗೆ ಟಿ20 ತಂಡದ ನಾಯಕತ್ವವನ್ನು ವಹಿಸಿದೆ. ಹಾರ್ದಿಕ್ ಪಾಂಡ್ಯಗೆ ಕನಿಷ್ಠ ಉಪನಾಯಕ ಸ್ಥಾನವನ್ನೂ ನೀಡಿಲ್ಲ.
ಶ್ರೀಲಂಕಾ ವಿರುದ್ಧದ ಸರಣಿಗೆ ಈಗಾಗಲೇ ಭಾರತೀಯ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ನಾಯಕ ರೋಹಿತ್ ಶರ್ಮ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಸೂರ್ಯಕುಮಾರ್ ಅವರನ್ನು ನೂತನ ಟಿ20 ನಾಯಕನನ್ನಾಗಿ ಘೋಷಿಸಲಾಗಿದೆ. ಈ ಎರಡು ಸ್ವರೂಪಗಳಲ್ಲಿ ಉಪನಾಯಕನ ಸ್ಥಾನಕ್ಕೆ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿದೆ.
ಟಿ20 ವಿಶ್ವಕಪ್‌ನಲ್ಲಿ ತಂಡದ ಉಪನಾಯಕರಾಗಿದ್ದ ಪಾಂಡ್ಯ ಅವರಿಗೆ ನಾಯಕತ್ವ ಸಿಗುವ ನಿರೀಕ್ಷೆಯಿತ್ತು. ಆದರೆ, ಕನಿಷ್ಠ ಉಪನಾಯಕ ಸ್ಥಾನವು ಸಿಕ್ಕಿಲ್ಲ. ಬಿಸಿಸಿಐ ನಿರ್ಧಾರದಿಂದ ನೋವಿನಲ್ಲಿರುವ ಹಾರ್ದಿಕ್‌ಗೆ ಹೊಸ ಕೋಚ್ ಗೌತಮ್ ಗಂಭೀರ್ ಹೊಸ ಗುರಿಯನ್ನು ನೀಡಿರುವಂತಿದೆ.
ಟಿ20 ಮಾದರಿ ಪಂದ್ಯದಲ್ಲಿ ಪಾಂಡ್ಯ ಸ್ಥಾನದ ಬಗ್ಗೆ ಅನುಮಾನವಿಲ್ಲ. ಆದರೆ, ಏಕದಿನ ಮಾದರಿ ಪಂದ್ಯದಲ್ಲಿ ಅವರ ಸ್ಥಾನ ಅನುಮಾನವಾಗಿದೆ. ಈ ಸ್ವರೂಪದಲ್ಲಿ ಮುಂದುವರಿಯಲು, ನೂತನ ಕೋಚ್ ಗಂಭೀರ್ ಅವರು ಹಾರ್ದಿಕ್‌ಗೆ ಕೆಲವು ನಿಯಮಗಳನ್ನು ಹಾಕಿದ್ದಾರೆ. ಬೌಲಿಂಗ್ನಲ್ಲಿ ಫಿಟ್ನೆಸ್ ಸಾಬೀತುಪಡಿಸುವುದು ಪ್ರಮುಖ ಗುರಿಯಾಗಿದೆ. ಅದರ ಭಾಗವಾಗಿ ವಿಜಯ್ ಹಜಾರೆ ಟ್ರೋಫಿಯನ್ನು ಹಾರ್ದಿಕ್ ಆಡಬೇಕಿದೆ. ಆ ಟೂರ್ನಿಯಲ್ಲಿ ಆಡುವ ಮೂಲಕ ಬೌಲಿಂಗ್ ಫಿಟ್ನೆಸ್ ಸಾಬೀತುಪಡಿಸಿದರೆ ಏಕದಿನ ಮಾದರಿ ಪಂದ್ಯದಲ್ಲಿ ಹಾರ್ದಿಕ್ ಸ್ಥಾನ ಖಾಯಂ ಆಗಲಿದೆ. ಈ ವಿಚಾರವಾಗಿ ಗಂಭೀರ್ ಅವರು ಹಾರ್ದಿಕ್‌ಗೆ ಭರವಸೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ಬೌಲಿಂಗ್ ಫಿಟ್ನೆಸ್ ಸಾಬೀತು ಮಾಡುವಲ್ಲಿ ವಿಫಲವಾದರೆ, ಬೇರೆ ಆಯ್ಕೆಯ ಮೊರೆ ಹೋಗಬೇಕಾಗುತ್ತದೆ ಎಂದು ಹಾರ್ದಿಕ್‌ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಹಾರ್ದಿಕ್ ಈ ಹಿಂದೆ ಪದೇಪದೆ ಗಾಯದ ಸಮಸ್ಯೆಯಿಂದ ಬಳಲಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏಕದಿನ ಮಾದರಿ ಪಂದ್ಯಗಳಲ್ಲಿ ಹೆಚ್ಚು ಓವರ್ ಬೌಲ್ ಮಾಡಿದರೆ ಗಾಯದ ಭೀತಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಗೌತಿ, ಹಾರ್ದಿಕ್‌ಗೆ ಹೊಸ ಗುರಿಯನ್ನು ನೀಡಿದ್ದಾರೆ. ಈ ಗುರಿಯನ್ನು ಪಾಂಡ್ಯ ಎಷ್ಟರಮಟ್ಟಿಗೆ ಜಯಿಸಬಲ್ಲರು ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)