ಏಳೇ ನಿಮಿಷಗಳಲ್ಲಿ ಕರ್ಸ್ಟನ್​ಗೆ ಒಲಿದಿತ್ತು ಕೋಚ್ ಹುದ್ದೆ!

Coach 15 June 20
Published on

ನವದೆಹಲಿ: ಭಾರತ ತಂಡದ 2011ರ ವಿಶ್ವಕಪ್ ಗೆಲುವಿನಲ್ಲಿ ಆಟಗಾರರಷ್ಟೇ ಪ್ರಮುಖ ಕೊಡುಗೆ ನೀಡಿದವರು ಆಗಿನ ಕೋಚ್ ಗ್ಯಾರಿ ಕರ್ಸ್ಟನ್. ಈ ಹುದ್ದೆ ಅನಿರೀಕ್ಷಿತವಾಗಿ ಒಲಿದುಬಂದುದನ್ನು ಸ್ವತಃ ಕರ್ಸ್ಟನ್ ಅವರೀಗ ಬಹಿರಂಗಪಡಿಸಿದ್ದಾರೆ. ಕೋಚ್ ಆಗುವ ಆಸಕ್ತಿಯನ್ನೇ ಹೊಂದಿರದಿದ್ದ ಕರ್ಸ್ಟನ್, ಹುದ್ದೆಗೆ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಆದರೆ 2007ರಲ್ಲಿ ಕೇವಲ ಏಳೇ ನಿಮಿಷಗಳಲ್ಲಿ ಅವರಿಗೆ ಈ ಮಹತ್ವದ ಹುದ್ದೆ ಒಲಿದಿತ್ತಂತೆ!

ಆಗಿನ ಕೋಚ್ ಆಯ್ಕೆ ಸಮಿತಿಯ ಭಾಗವಾಗಿದ್ದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಅವರ ವಿಶೇಷ ಆಹ್ವಾನದ ಮೇರೆಗೆ ಕರ್ಸ್ಟನ್, ಸಂದರ್ಶನಕ್ಕೆ ಹಾಜರಾಗಿದ್ದರು. ‘ಭಾರತ ತಂಡಕ್ಕೆ ತರಬೇತಿ ನೀಡುವ ಬಗ್ಗೆ ಪರಿಶೀಲಿಸುವಿರಾ ಎಂದು ಸುನೀಲ್ ಗಾವಸ್ಕರ್ ಅವರಿಂದ ನನಗೊಂದು ಇ-ಮೇಲ್ ಬಂದಿತ್ತು. ಅದೊಂದು ತಮಾಷೆ ಎಂದೇ ನಾನು ಭಾವಿಸಿದ್ದೆ. ಹೀಗಾಗಿ ಅದಕ್ಕೆ ಉತ್ತರಿಸಿರಲಿಲ್ಲ. ಬಳಿಕ, ಸಂದರ್ಶನಕ್ಕೆ ಬರುವಿರಾ ಎಂದು ಅವರಿಂದ ಮತ್ತೊಂದು ಇ-ಮೇಲ್ ಬಂತು. ನಾನು ಅದನ್ನು ಪತ್ನಿಗೆ ತೋರಿಸಿದಾಗ, ಬಹುಶಃ ಬೇರೆಯವರಿಗೆ ಕಳುಹಿಸಬೇಕಾದ ಇ-ಮೇಲ್ ತಪ್ಪಿ ನಿಮಗೆ ಬಂದಿರಬಹುದು ಎಂದಿದ್ದಳು. ಹೀಗೆ ವಿಚಿತ್ರ ರೀತಿಯಲ್ಲಿ ನಾನು ಕೋಚಿಂಗ್​ನತ್ತ ಬಂದಿದ್ದೆ. ನನಗೆ ಆಗ ಯಾವುದೇ ಕೋಚಿಂಗ್ ಅನುಭವವೂ ಇರಲಿಲ್ಲ’ ಎಂದು ಕರ್ಸ್ಟನ್ ವಿವರಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಆಗ್ತಾರಂತೆ ಮೊಹಮದ್ ಅಜರುದ್ದೀನ್

ಕರ್ಸ್ಟನ್ ಮಾರ್ಗದರ್ಶನದಲ್ಲಿ ಭಾರತ ತಂಡ 2009ರಲ್ಲಿ ಮೊದಲ ಬಾರಿಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೆ ಏರಿತ್ತು. 2 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲುವಿನೊಂದಿಗೆ ಅವರು ಕೋಚ್ ಹುದ್ದೆಯನ್ನೂ ತ್ಯಜಿಸಿದ್ದರು.

ಕೋಚ್ ಹುದ್ದೆಯ ಸಂದರ್ಶನ ಎದುರಿಸಲು ಯಾವುದೇ ಸಿದ್ಧತೆಗಳಿಲ್ಲದೆ ಕರ್ಸ್ಟನ್ ತೆರಳಿದ್ದರಂತೆ. ಭಾರತೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ನಿಮ್ಮ ಯೋಜನೆಗಳೇನು ಎಂದು ಆಗಿನ ಬಿಸಿಸಿಐ ಕಾರ್ಯದರ್ಶಿ ಪ್ರಶ್ನಿಸಿದಾಗ ಕರ್ಸ್ಟನ್, ನನ್ನ ಬಳಿ ಏನೂ ಇಲ್ಲ. ಈ ಬಗ್ಗೆ ಯಾರೂ ತಿಳಿಸಿರಲಿಲ್ಲ. ನಾನು ಈಗಷ್ಟೇ ಬಂದೆ ಎಂದಿದ್ದರಂತೆ. ಆಗಿನ ಕೋಚ್ ಆಯ್ಕೆ ಸಮಿತಿ ಸದಸ್ಯರಾಗಿದ್ದ ಈಗಿನ ಕೋಚ್ ರವಿಶಾಸ್ತ್ರಿ ಆಗ, ‘ಗ್ಯಾರಿ, ಭಾರತೀಯರನ್ನು ಸೋಲಿಸಲು ದಕ್ಷಿಣ ಆಫ್ರಿಕಾ ತಂಡದ ಯೋಜನೆಗಳು ಏನಿರುತ್ತವೆ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಕರ್ಸ್ಟನ್ 2-3 ನಿಮಿಷಗಳ ಕಾಲ ಉತ್ತರಿಸಿದ್ದರು. ಅದರಿಂದ ರವಿಶಾಸ್ತ್ರಿ ಮತ್ತು ಮಂಡಳಿ ಅಧಿಕಾರಿಗಳು ಪ್ರಭಾವಿತರಾಗಿದ್ದರು. 3 ನಿಮಿಷಗಳ ಬಳಿಕ ಮಂಡಳಿಯ ಕಾರ್ಯದರ್ಶಿ ಬಂದು ನನಗೆ ಗುತ್ತಿಗೆ ನೀಡಿದ್ದರು ಎಂದು ಕರ್ಸ್ಟನ್ ವಿವರಿಸಿದ್ದಾರೆ. ಇದನ್ನೂ ಓದಿ: ಪ್ರಕೃತಿಯ ರಮಣೀಯ ತಾಣ ಧೋನಿ ಫಾರ್ಮ್ ಹೌಸ್..

ನೀವೇನು ಇಲ್ಲಿ, ಕುಂಬ್ಳೆ ಅಚ್ಚರಿ!

ಕೋಚ್ ಹುದ್ದೆಯ ಸಂದರ್ಶನ ಎದುರಿಸಲು ಭಾರತಕ್ಕೆ ಬಂದಿಳಿದಾಗ ಕರ್ಸ್ಟನ್ ಅವರನ್ನು ಕಂಡು ಆಗಿನ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ ಕೂಡ ಆಶ್ಚರ್ಯಚಕಿತರಾಗಿದ್ದರಂತೆ. ‘ನಾನು ಸಂದರ್ಶನಕ್ಕೆ ಹೋದಾಗ ವಿಚಿತ್ರ ಅನುಭವ ಎದುರಾಗಿತ್ತು. ಅಲ್ಲಿ ಎದುರಾದ ಆಗಿನ ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ, ನೀವೇನು ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದರು. ನಾನು ನಿಮಗೆ ತರಬೇತಿ ನೀಡುವ ಸಲುವಾಗಿ ಸಂದರ್ಶನಕ್ಕೆ ಬಂದಿದ್ದೇನೆ ಎಂದು ಅವರಿಗೆ ತಿಳಿಸಿದೆ. ಆಗ ಇಬ್ಬರೂ ಜೋರಾಗಿ ನಕ್ಕಿದ್ದೆವು’ ಎಂದು ಕರ್ಸ್ಟನ್ ನೆನಪಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net