

ಬೆಂಗಳೂರು: ‘ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ನೋಡಿದ ಬಳಿಕ ಧೋನಿ ಅಭಿಮಾನಿಗಳೆಲ್ಲರೂ ಸುಶಾಂತ್ ಸಿಂಗ್ ರಜಪೂತ್‌ಗೂ ಅಭಿಮಾನಿಗಳಾಗಿದ್ದರು. ಅಂಥ ಅಮೋಘ ನಟನೆ ಸುಶಾಂತ್ ಅವರದಾಗಿತ್ತು. ಸಿನಿಮಾಗಾಗಿ ಧೋನಿ ಮ್ಯಾನರಿಸಂಗಳನ್ನು ಮೈಗೂಡಿಸಿಕೊಂಡಿದ್ದು ಮಾತ್ರವಲ್ಲ, ಅವರಂತೆ ಕ್ರಿಕೆಟ್ ಕೂಡ ಆಡಲು ಕಲಿತಿದ್ದರು. ಅದರಲ್ಲೂ ಧೋನಿ ಅವರ ಜನಪ್ರಿಯ ಹೆಲಿಕಾಪ್ಟರ್ ಶಾಟ್ ಅನ್ನು ಕೂಡ ಸುಶಾಂತ್ ಪರಿಪೂರ್ಣವಾಗಿ ಕಲಿತಿದ್ದರು. ಇದನ್ನು ನೋಡಿದ ಧೋನಿ, ಸುಶಾಂತ್ ರಣಜಿ ಟ್ರೋಫಿಯಲ್ಲೂ ಆಡಬಹುದು ಎಂದಿದ್ದರಂತೆ!
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಆಗ್ತಾರಂತೆ ಮೊಹಮದ್ ಅಜರುದ್ದೀನ್
ಧೋನಿ ಸಿನಿಮಾದ ನಿರ್ಮಾಪಕ ಹಾಗೂ ಅವರ ಗೆಳೆಯ ಅರುಣ್ ಪಾಂಡೆ, ದುರಂತ ಅಂತ್ಯ ಕಂಡ ಸುಶಾಂತ್ ಜತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದು, ‘ಸುಶಾಂತ್ ಅವರ ಮಕ್ಕಳಂಥ ನಗು ಇನ್ನೂ ನನ್ನ ಕಣ್ಣ ಮುಂದೆ ಬರುತ್ತಿದೆ. ಸುಶಾಂತ್ ಸಿನಿಮಾಗಾಗಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾಗ ಆಡಿದ್ದ ಹೆಲಿಕಾಪ್ಟರ್ ಶಾಟ್‌ನ ವಿಡಿಯೋವನ್ನು ಅವನ ಮೊಬೈಲ್‌ನಲ್ಲಿ ನೋಡಿದ್ದ ಧೋನಿ, ‘ಅರ‌್ರೆ ತುತೋ ಬಿಲ್‌ಕುಲ್ ಫೋಟೋಕಾಪಿ ಕರ್ ದಿಯಾ, ರಣಜಿ ಟ್ರೋಫಿ ಖೇಲ್ ಜಾವೋಗೆ ತುಮ್ (ಅರ‌್ರೆ ನೀನಂತೂ ಸಂಪೂರ್ಣ ಫೋಟೋಕಾಪಿ ಮಾಡಿ ಬಿಟ್ಟಿದ್ದೀಯಾ. ನೀನು ರಣಜಿ ಟ್ರೋಫಿ ಆಡುವೆ) ಎಂದಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಾವಿನ ಬಗ್ಗೆ ಧೋನಿ ಮೌನವೇಕೆ?
104 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಧೋನಿ ಸಿನಿಮಾ 2016ರಲ್ಲಿ ಬಿಡುಗಡೆಗೊಂಡು 216 ಕೋಟಿ ರೂ. ಗಳಿಕೆ ಮಾಡಿತ್ತು. ಸಿನಿಮಾದ ಚಿತ್ರೀಕರಣಕ್ಕೆ ಮುನ್ನ ಸುಶಾಂತ್, ಧೋನಿ ಜತೆಗೆ ದೀರ್ಘಕಾಲವನ್ನು ಕಳೆದಿದ್ದರಂತೆ. ಆ ವೇಳೆ ಧೋನಿಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರಿಂದ ರೋಸಿಹೋದ ಧೋನಿ, ‘ಅರ‌್ರೆ ಭಾಯಿ ಕಿತ್ನೆ ಕ್ವಶ್ಚನ್ ಪೋಚ್ತಾ ಹೈ ತು’ (ಅರ‌್ರೆ ಎಷ್ಟೊಂದು ಪ್ರಶ್ನೆಗಳನ್ನು ಕೇಳುವೆ ನೀನು) ಎಂದಿದ್ದರಂತೆ. ಅದಕ್ಕೆ ಸುಶಾಂತ್, ‘ಭಾಯಿಸಾಬ್, ಎಲ್ಲರೂ ನನ್ನಲ್ಲಿ ನಿಮ್ಮನ್ನು ಹುಡುಕಲಿದ್ದಾರೆ. ಹಾಗಾಗಿ ನಾನು ಎಲ್ಲವನ್ನೂ ನಿಮ್ಮಂತೆ ಮಾಡಬೇಕಾಗುತ್ತದೆ’ ಎಂದುತ್ತರಿಸಿದ್ದರು ಎಂದು ಅರುಣ್ ಪಾಂಡೆ ವಿವರಿಸಿದ್ದಾರೆ.
ಇದನ್ನೂ ಓದಿ: ಯುಎಸ್ ಓಪನ್ಗೆ ಆಟಗಾರರಿಂದಲೇ ವಿರೋಧ!
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದಲೂ ಸಂತಾಪ
ಧೋನಿ ಸಾರಥ್ಯದ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸುಶಾಂತ್ ಸಾವಿಗೆ ಕಂಬನಿ ಮಿಡಿದಿದ್ದು, ‘ನಾವೆಂದೂ ನಿರೀಕ್ಷಿಸಿರದ ಅಂತ್ಯ’ ಎಂದು ಸುಶಾಂತ್ ಅವರ ಧೋನಿ ಪಾತ್ರದ ಚಿತ್ರದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.