ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಇಂದು ಪ್ರಕಟ

ipl-dream11-Logo
Published on

ನವದೆಹಲಿ: ಈಗಾಗಲೆ ಎಲ್ಲ ತಂಡಗಳು ಯುಎಇಗೆ ತೆರಳಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಟೂರ್ನಿಗೆ 2 ವಾರಗಳ ಅಂತರವಷ್ಟೇ ಬಾಕಿ ಉಳಿದಿದ್ದರೂ ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿಲ್ಲ. ಇದೀಗ, ಹಲವಾರು ಅಡೆತಡೆಗಳ ಬಳಿಕ ಕೊನೆಗೂ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

‘ವೇಳಾಪಟ್ಟಿ ಪ್ರಕಟ ಸಾಕಷ್ಟು ತಡವಾಗಿದೆ. ವೇಳಾಪಟ್ಟಿ ಬಹುತೇಕ ಅಂತಿಮವಾಗಿದ್ದು, ಶುಕ್ರವಾರ ಬಿಡುಗಡೆಯಾಗಲಿದೆ’ ಎಂದು ಗಂಗೂಲಿ ಗುರುವಾರ ತಿಳಿಸಿದ್ದಾರೆ. ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಿಗದಿಯಾಗಿದೆ.

ಈ ಹಿಂದೆ ನಿಶ್ಚಯಿಸಿದ್ದಂತೆಯೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವೆಯೇ ಉದ್ಘಾಟನಾ ಪಂದ್ಯ ನಡೆಯುವ ನಿರೀಕ್ಷೆ ಇದೆ. ಈ ಮುನ್ನ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಬದಲಿಗೆ ಆರ್‌ಸಿಬಿ ತಂಡ ಕಣಕ್ಕಿಳಿಯಲಿದೆ ಎಂದು ವರದಿಯಾಗಿತ್ತು. ಸಿಎಸ್‌ಕೆ ತಂಡದ 13 ಸದಸ್ಯರಿಗೆ ಕರೊನಾ ಸೋಂಕು ದೃಢಪಟ್ಟಿದ್ದು ಇದಕ್ಕೆ ಕಾರಣ.

ಇನ್ನು ಅಬುಧಾಬಿ ನಗರ ಪ್ರವೇಶಕ್ಕೆ ಕೋವಿಡ್-19 ಪರೀಕ್ಷೆ ಕಡ್ಡಾಯ ಮಾಡಿದ್ದ ಕಾರಣದಿಂದಲೂ ವೇಳಾಪಟ್ಟಿ ಅಂತಿಮಗೊಳಿಸಲು ಹಿನ್ನಡೆಯಾಗಿತ್ತು. ಆದರೆ ಇದೀಗ ಅಬುಧಾಬಿ ಸರ್ಕಾರ ಐಪಿಎಲ್‌ಗೆ ವಿನಾಯಿತಿ ನೀಡಿದ್ದು, ಟೂರ್ನಿ ಯೋಜನೆಯಂತೆಯೇ ಅರಬ್ ರಾಷ್ಟ್ರದ 3 ತಾಣಗಳಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net