

ತಿರುವನಂತಪುರ: ಕೇರಳದ ಮಾಜಿ ರಣಜಿ ಕ್ರಿಕೆಟಿಗ ಜಯಮೋಹನ್ ಥಾಂಪಿ ಅವರ ಮೃತದೇಹವು ಅವರ ಮನೆಯಲ್ಲಿಯೇ ಪತ್ತೆಯಾಗಿದೆ!
ಮಗನ ಜತೆ ಕೇರಳದ ಮನಕಾಡ್‌ನಲ್ಲಿ ವಾಸಿಸುತ್ತಿದ್ದ ಜಯಮೋಹನ್ ಅವರ ಮೃತದೇಹವು ದೊರೆತಿದ್ದು, ಕೊಲೆ ಆರೋಪದಲ್ಲಿ ಸದ್ಯ ಮಗ ಅಶ್ವಿನ್ನನ್ನು ಬಂಧಿಸಲಾಗಿದೆ.
ಜಯಮೋಹನ್ ಅವರು ತ್ರವನ್‌ಕೋರ್‌ನಲ್ಲಿ ಬ್ಯಾಂಕ್‌ನ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಶ್ವಿನ್, ಕೇರಳದಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಶವವಿದ್ದರೂ ಮಗ ಅದರ ಬಗ್ಗೆ ಮಾಹಿತಿ ನೀಡದ ಕಾರಣ, ಅವನ ಮೇಲೆಯೇ ಪೊಲೀಸರಿಗೆ ಸಂದೇಹ ಬಂದು ಬಂಧಿಸಿದ್ದಾರೆ.
ಬಂಧನದ ವೇಳೆ ತಾನೇ ಕೊಲೆ ಮಾಡಿರುವುದಾಗಿ ಮಗ ಒಪ್ಪಿಕೊಂಡ ಎಂದು ಹೇಳಲಾಗುತ್ತಿದ್ದು, ಕೊಲೆಗೆ ನಿಖರ ಕಾರಣ ಇದುವರೆಗೆ ತಿಳಿದುಬಂದಿಲ್ಲ.
ಜಯಮೋಹನ್ ಥಾಪಿ ಅವರಿಗೆ 64 ವರ್ಷ ವಯಸ್ಸಾಗಿತ್ತು. ಇವರು ಇದಾಗಲೇ ಆರು ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ವಿಕೆಟ್ ಕೀಪರ್ -ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು. ಬಲಗೈ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿದ್ದ ಜಯಮೋಹನ್ ಅವರು ಕೇರಳ ತಂಡದ ಪರವಾಗಿ 1979 ಮತ್ತು 1982ರ ನಡುವೆ ಆಟವಾಡಿದ್ದರು. ಈ ಪಂದ್ಯದಲ್ಲಿ 114 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಕೇರಳ ಅಂಡರ್-22 ತಂಡದ ಪರ ಮೂರು ವರ್ಷಗಳ ಕಾಲ ಆಡಿದ್ದರು ಎಂದು ಕ್ರಿಕೆಟ್ ಸಂಸ್ಥೆ ಹೇಳಿದೆ.
ಜಯಮೋಹನ್ ಅವರ ಹೆಂಡತಿ ಅನಿತಾ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರ ಸಾವಿನ ನಂತರ ಜಯಮೋಹನ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಸದ್ಯ ಮಗ ಅಶ್ವಿನ್ ಸೇರಿದಂತೆ ಕೊಲೆಗೆ ಸಹಕರಿಸಿರುವ ನೆರೆಹೊರೆಯವರನ್ನೂ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಜಯಮೋಹನ್ ಅವರ ಹಣೆಗೆ ಬಲವಾದ ಪೆಟ್ಟಾಗಿದ್ದು ರಕ್ತಸ್ರಾವವಾಗಿರುವ ಗುರುತು ಇದೆ. ಈ ಹಿನ್ನೆಲೆಯಲ್ಲಿ ಮಗ ಅವರನ್ನು ಬಲವಂತವಾಗಿ ದೂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.