ಮೂರು ಗಂಟೆ ಲಿಫ್ಟ್​ನಲ್ಲಿ ಸಿಲುಕಿ ಒದ್ದಾಡಿದ ಮಕ್ಕಳು! ಮುಂದೇನಾಯ್ತು?

children
Published on

ಕಲ್ಯಾಣ್​ (ಮಹಾರಾಷ್ಟ್ರ): ಬಹು ಅಂತಸ್ತಿನ ಕಟ್ಟಡವೊಂದರಲ್ಲಿನ ಲಿಫ್ಟ್​ ಮಧ್ಯೆಯೇ ನಿಂತು ಸುಮಾರು ಮೂರು ಗಂಟೆಗಳ ಕಾಲ ಮೂವರು ಮಕ್ಕಳು ಸಿಲುಕಿಕೊಂಡಿದ್ದ ಘಟನೆ ಮಹಾರಾಷ್ಟ್ರದ ಕಲ್ಯಾಣ್​ನಲ್ಲಿ ನಡೆದಿದೆ.

ಗಾಂಧಿ ಚೌಕ್‌ನ ಮೋಹನ್ ಚೆಡ್ಡಾ ಅವೆನ್ಯೂ ಸೊಸೈಟಿಯಲ್ಲಿರುವ ಲಿಫ್ಟ್​ ಕೆಟ್ಟಿದ್ದರಿಂದ ಈ ಅನಾಹುತ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿರುವ ಲಿಫ್ಟ್‌ನೊಳಗೆ ಮಕ್ಕಳು ಸಿಲುಕಿಕೊಂಡಿದ್ದರು. ಲಿಫ್ಟ್​ ಒಳಗಿನಿಂದ ಮಕ್ಕಳು ಕೂಗಿಕೊಂಡರೂ, ಮೊದಲು ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಸಹಾಯಕ್ಕಾಗಿ ಅಂಗಲಾಚಿದ ಮಕ್ಕಳು ಆರಂಭದಲ್ಲಿ ಕೂಗಿ ಕೂಗಿ ಸುಸ್ತಾದರು.

ನಂತರ ಲಿಫ್ಟ್​ ಕೆಟ್ಟಿರುವ ಬಗ್ಗೆ ಅಲ್ಲಿಯ ನಿವಾಸಿಗಳಿಗೆ ತಿಳಿದಿದೆ. ತಮ್ಮ ಮಕ್ಕಳು ಮನೆಗೆ ಮರಳದ ಕಾರಣ, ಆತಂಕಗೊಂಡಿದ್ದ ಮಕ್ಕಳ ಪಾಲಕರಿಗೆ ನಂತರ ವಿಷಯ ತಿಳಿದಿದೆ. ಇದಾಗುವ ಹೊತ್ತಿಗೆ ಸುಮಾರು ಮೂರು ಗಂಟೆ ಕಳೆದಿತ್ತು. ಸೊಸೈಟಿಯ ತಂತ್ರಜ್ಞ ಎಷ್ಟೇ ಹರಸಾಹಸ ಪಟ್ಟರೂ ಲಿಫ್ಟ್‌ನ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ, ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತು.

ಅಗ್ನಿಶಾಮಕ ಕೇಂದ್ರದ ಉಸ್ತುವಾರಿ ವಿನಾಯಕ್ ಲೋಖಂಡೆ ಅವರ ನಾಲ್ಕು ಸದಸ್ಯರ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು. ಅದಾಗಲೇ ಮೂರು ಗಂಟೆ ಸಿಲುಕಿ ಅಳುತ್ತಿದ್ದ ಮಕ್ಕಳು ಕಂಗೆಟ್ಟು ಹೋಗಿದ್ದರು. ವೆಂಟಿಲೇಟರ್​ ಲಿಫ್ಟ್​ನಲ್ಲಿ ಇದ್ದುದರಿಂದ ಮಕ್ಕಳ ಜೀವಕ್ಕೆ ಅಪಾಯವಾಗಿಲ್ಲ ಎಂದು ಖಾತ್ರಿಪಡಿಸಿಕೊಂಡ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದರು.

ಅದಾಗಲೇ ಮಕ್ಕಳು ವಿಪರೀತ ಭಯಗೊಂಡಿದ್ದರಿಂದ ಹೈಡ್ರಾಲಿಕ್ ಕಟ್ಟರ್ ಅನ್ನು ಬಳಸಲು ನಿರ್ಧರಿಸಿದ ಸಿಬ್ಬಂದಿ, ಅದರಿಂದ ಲಿಫ್ಟ್​ ಬಾಗಿಲನ್ನು ಮುರಿದು ಮೂವರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸಂಪೂರ್ಣ ಕಾರ್ಯಾಚರಣೆಗೆ ಕೇವಲ 10 ನಿಮಿಷ ತೆಗೆದುಕೊಂಡು ಮಕ್ಕಳನ್ನು ರಕ್ಷಿಸಿದ ಸಿಬ್ಬಂದಿಗೆ ಎಲ್ಲರೂ ಅಭಿನಂದಿಸಿದ್ದಾರೆ. ನಮನ್ ಜೈನ್ (12), ದಕ್ಷಿಣ ಜೈನ್ (8) ಮತ್ತು ವೀರ್ತಿ ಜೈನ್ (8) ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net