ಬೈಕ್​ ಕದಿಯಲು ಬರುವೆ, ತಾಕತ್​ ಇದ್ರೆ ಹಿಡೀರಿ: ಪೊಲೀಸರಿಗೆ ಕಳ್ಳನ ಸವಾಲ್​!

thiefweb
Published on

ಭೋಪಾಲ್: ಇಂಥ ಕಡೆಯಲ್ಲಿ ಬಂದು, ಇಂಥವರನ್ನು ಕಿಡ್ನಾಪ್​ ಮಾಡಿಕೊಂಡು ಹೋಗುವೆ, ಇಂಥ ಸ್ಥಳದಲ್ಲಿ ಇವರನ್ನು ಕೊಲೆ ಮಾಡುವೆ, ಈ ಮನೆಯಲ್ಲಿ ಕಳ್ಳತನ ಮಾಡಿಹೋಗುವೆ ಎಂದು ಪೊಲೀಸರಿಗೇ ಚಾಲೆಂಜ್​ ಹಾಕುವ ಕಳ್ಳರನ್ನೋ ಅಥವಾ ನಾಯಕನನ್ನೋ ಎಲ್ಲರೂ ಚಲನಚಿತ್ರದಲ್ಲಿ ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿಯೂ ಇಂಥದ್ದೇ ಒಂದು ಸವಾಲ್​ ಹಾಕಿದ್ದಾನೆ ಒಬ್ಬ ಕಳ್ಳ!

ಇದು ನಡೆದಿರುವುದು ಭೋಪಾಲ್​ನ ಚಿಂದ್ವಾರ ಜಿಲ್ಲೆಯ ತ್ರಿಲೋಕಿ ನಗರದಲ್ಲಿ. ನಾನು ಇದಾಗಲೇ 49 ಕಳ್ಳತನ ಮಾಡಿ ಆರಾಮಾಗಿದ್ದೇನೆ. ಇದು ನನ್ನ 50ನೇ ಕಳ್ಳತನ, ತಾಕತ್​ ಇದ್ದರೆ ನನ್ನನ್ನು ಹಿಡೀರಿ ಎಂದು ಕಳ್ಳನೊಬ್ಬ ಪೊಲೀಸರಿಗೆ ಸವಾಲೆಸೆದಿದ್ದು, ಪೊಲೀಸರನ್ನು ಫಜೀತಿಗೆ ಸಿಲುಕಿಸಿದ್ದಾನೆ. ಸಾಲದು ಎಂಬುದಕ್ಕೆ ತಾನು ಕಳ್ಳತನ ಮಾಡಲು ಬರುವ ಜಾಗವನ್ನೂ ತಿಳಿಸಿದ್ದಾನೆ!

ಚಿಂದ್ವಾರಾ ಪೊಲೀಸರ ಹೆಸರಿನಲ್ಲಿ ಈ ಪತ್ರ ಇದೆ. ನಾನು ಇಂಥ ಸ್ಥಳದಲ್ಲಿ, ಇಂಥ ದಿನ 50ನೇ ಕಳ್ಳತನ ಮಾಡಲು ಬರುತ್ತಿರುವೆ, ಸಾಧ್ಯವಾದರೆ ಹಿಡಿಯಿರಿ ಎಂದಿದ್ದಾನೆ. ಇದು ನಕಲಿ ಪತ್ರವೋ ಅಥವಾ ನಿಜವಾಗಿಯೂ ಕಳ್ಳನೇ ಬರೆದಿದ್ದೋ ಎಂಬ ತನಿಖೆಯನ್ನು ಪೊಲೀಸರು ಶುರು ಮಾಡಿದ್ದಾರೆ.

ತ್ರಿಲೋಕಿ ನಗರದ ಚೀಲವೊಂದರಲ್ಲಿ ಈ ಪತ್ರ ಪತ್ತೆಯಾಗಿದೆ. ಅದರ ಜತೆಗೆ ಎರಡು ಬಳೆಗಳನ್ನು ಇಡಲಾಗಿದೆ. ಇದು ಚಿನ್ನದ ಬಳೆಗಳನ್ನು ಹೋಲುವ ರೀತಿ ಇತ್ತು. ಅದರೆ ಅದನ್ನು ಪರೀಕ್ಷಿಸಿದಾಗ ಅದು ಚಿನ್ನದ್ದಲ್ಲ ಎಂದು ತಿಳಿದುಬಂದಿದೆ.

ಈ ಪತ್ರದಲ್ಲಿ ಬರೆದಿರುವುದು ಏನೆಂದರೆ: "ನಾನು ಇನ್ನೊಮ್ಮೆ ತ್ರಿಲೋಕಿ ನಗರಕ್ಕೆ ಬರುತ್ತಿದ್ದೇನೆ. ಅಲ್ಲಿರುವ 6ನೇ ಲೇನ್​ ರಸ್ತೆಯಲ್ಲಿರುವ ಬೈಕ್​ ಕದಿಯುತ್ತೇನೆ. ಇದು ನನ್ನ 50ನೇ ಕಳ್ಳತನ,. ಸಾಧ್ಯವಾದರೆ ಹಿಡಿಯಿರಿ' ಎಂದು ಇದೆ. ಅಷ್ಟೇ ಅಲ್ಲದೇ, ಇಲ್ಲಿರುವವರು ತಂತಮ್ಮ ಬೈಕ್​ ಮತ್ತು ಲಾಕರ್​ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಎಂದೂ ಬರೆದಿರುವ ಕಳ್ಳ ತಾವು ಒಟ್ಟಾಗಿ 15 ಜನ ಬರಲಿದ್ದೇವೆ ಎಂದಿದ್ದಾನೆ!

ಈ ಜಾಗದಲ್ಲಿ ಇರುವ ಮನೆಯೊಂದರಲ್ಲಿನ ಮಹಿಳೆಯೊಬ್ಬರು ಗಿಡಕ್ಕೆ ನೀರು ಹಾಕುವಾಗ ಸಂಶಯಾಸ್ಪದ ಚೀಲ ಕಂಡಿತ್ತು. ಈ ಬಗ್ಗೆ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದರು. ಅದರಲ್ಲಿ ಪೊಲೀಸರಿಗೆ ಈ ಪತ್ರ ಸಿಕ್ಕಿದೆ. ಅಚ್ಚರಿ ಎಂದರೆ, ಈ ಪ್ರದೇಶದಲ್ಲಿ ಇದಾಗಲೇ ಹಲವಾರು ಬೈಕ್​ಗಳ ಕಳ್ಳತನವೂ ಆಗಿದೆ ಎಂದಿದ್ದಾರೆ ಸಬ್​ ಇನ್ಸ್​ಪೆಕ್ಟರ್​ ವಿವೇಕ್​ ಅಗರವಾಲ್​.

ನಮಗೆ ಇದಾಗಲೇ ಈ ವ್ಯಕ್ತಿಯ ಬಗ್ಗೆ ಸ್ವಲ್ಪ ಸುಳಿವು ಸಿಕ್ಕಿದೆ. ಈ ಪತ್ರ ಬರೆಯುವಾಗ ಬಳಸಿರುವ ನೋಟ್​ಬುಕ್​ಬಗ್ಗೆಯೂ ಪತ್ತೆಯಾಗಿದೆ. ಈ ಭಾಗದಲ್ಲಿ ಬೈಕ್​ ಕಳ್ಳತನ ಆಗುತ್ತಿದೆ, ಆದರೆ ಪತ್ರದಲ್ಲಿ ಹೇಳಿರುವಂತೆ 49 ಆಗಿಲ್ಲ. ಆದ್ದರಿಂದ ಈ ಪತ್ರದಲ್ಲಿ ಉಲ್ಲೇಖವಾಗಿರುವುದು ನಿಜವೋ, ಸುಳ್ಳೋ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ವಿವೇಕ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net