

ನವದೆಹಲಿ: ಈ ಹಿಂದೆ ಎಂಎಸ್ ಧೋನಿ ನಂತರದಲ್ಲಿ ಭಾರತ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಹೆಚ್ಚಿನವರ ಬಳಿಕ ಸ್ಪಷ್ಟ ಉತ್ತರವಿತ್ತು. ಅದುವೇ ವಿರಾಟ್ ಕೊಹ್ಲಿ. ಆದರೆ ಇದೀಗ ವಿರಾಟ್ ಕೊಹ್ಲಿ ನಂತರದಲ್ಲಿ ಭಾರತ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಹೆಚ್ಚಿನವರಲ್ಲಿ ಗೊಂದಲಗಳು ಏಳುತ್ತವೆ. ಈ ಸಮಯದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್, ಕೊಹ್ಲಿ ಉತ್ತರಾಧಿಕಾರಿಯಾಗಿ ಭಾರತ ತಂಡವನ್ನು ಮುನ್ನಡೆಸಬಹುದಾದ 3 ಆಟಗಾರರ ಹೆಸರು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಅಭಿಮಾನಿಯೊಬ್ಬ ಕೇಳಿರುವ ಭಾರತ ತಂಡದ ಭವಿಷ್ಯದ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಲ್ಮಾನ್ ಬಟ್, ಹಿರಿಯ ಆಟಗಾರರಾದ ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಜತೆಗೆ ರಿಷಭ್ ಪಂತ್ ಕೂಡ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಆಗಬಲ್ಲ ಆಟಗಾರ ಎಂದು ಹೇಳಿದ್ದಾರೆ.
ರಿಷಭ್ ಪಂತ್ ಅವರ ದೇಶೀಯ ಕ್ರಿಕೆಟ್ ದಾಖಲೆಗಳ ಬಗ್ಗೆ ನನಗೆ ವಿವರವಾಗಿ ಗೊತ್ತಿಲ್ಲ. ಆದರೆ ಐಪಿಎಲ್ನಲ್ಲಿ ನಾನು ನೋಡಿದ ಮಟ್ಟಿಗೆ, ರಿಷಭ್ ಪಂತ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಒಪ್ಪಿಸಲಾಗಿದೆ. ಹೀಗಾಗಿ ಬಿಸಿಸಿಐ ಕೂಡ ಅವರ ಭವಿಷ್ಯದ ಬಗ್ಗೆ ಕೆಲವು ಯೋಜನೆಗಳನ್ನು ಹೊಂದಿರಬಹುದು ಎಂದು ಸಲ್ಮಾನ್ ಬಟ್ ಹೇಳಿದ್ದಾರೆ. ಜತೆಗೆ ವಿರಾಟ್ ಕೊಹ್ಲಿ ಇನ್ನೂ ಯುವಕರಾಗಿರುವ ಕಾರಣ 8-9 ವರ್ಷಗಳ ಕಾಲ ಅವರೇ ನಾಯಕರಾಗಿ ಮುಂದುವರಿಯಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ 5 ಬಾರಿ ಟ್ರೋಫಿ ಜಯಿಸಿದ ಅನುಭವ ಹೊಂದಿರುವ ರೋಹಿತ್ ಶರ್ಮ ನಾಯಕತ್ವವನ್ನೂ ಹೊಗಳಿರುವ ಸಲ್ಮಾನ್ ಬಟ್, ರೋಹಿತ್ ನಾಯಕತ್ವ ನನಗಿಷ್ಟ. ಉತ್ತಮ ಕಾರ್ಯತಂತ್ರಗಳಿಂದಾಗಿ ಅವರು ಉತ್ತಮ ನಾಯಕರೆನಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಗೈರಿನಲ್ಲಿ ಭಾರತ ತಂಡವನ್ನು ಐತಿಹಾಸಿಕ ಸರಣಿ ಜಯದತ್ತ ಮುನ್ನಡೆಸಿದ ಅಜಿಂಕ್ಯ ರಹಾನೆಯ ನಾಯಕತ್ವದಿಂದಲೂ ಪ್ರಭಾವಿತರಾಗಿರುವ ಸಲ್ಮಾನ್ ಬಟ್, ರಹಾನೆ ಅವರ ನಿರ್ಧಾರಗಳಲ್ಲಿ ಸ್ಪಷ್ಟತೆ ಇರುತ್ತದೆ ಎಂದಿದ್ದಾರೆ.