

ನವದೆಹಲಿ: ಭಾರತಕ್ಕೆ 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಇದೀಗ ಭಾರತ ತಂಡ ಚೊಚ್ಚಲ ಟೆಸ್ಟ್ ವಿಶ್ವಕಪ್ನಲ್ಲಿ (ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್) ಪ್ರಶಸ್ತಿ ಸುತ್ತಿನ ಹೋರಾಟ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಟೆಸ್ಟ್ ವಿಶ್ವಕಪ್ನ ಫೈನಲ್ ಪಂದ್ಯ ಈಗ ನಿಗದಿಯಾಗಿರುವ ಮಾದರಿಗಿಂತ ಭಿನ್ನವಾಗಿರುತ್ತದೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ಹಾಗಾದರೆ ಕಪಿಲ್ ದೇವ್ ಪ್ರಕಾರ ಟೆಸ್ಟ್ ವಿಶ್ವಕಪ್ ಫೈನಲ್ ಸ್ವರೂಪ ಹೇಗಿರಬೇಕಾಗಿತ್ತು ಗೊತ್ತೇ?
ಟೆಸ್ಟ್ ವಿಶ್ವಕಪ್ನ ಪ್ರಶಸ್ತಿ ಸುತ್ತಿನ ಹೋರಾಟ ಬೆಸ್ಟ್ ಆಫ್ ತ್ರಿ ಮಾದರಿಯಲ್ಲಿ ನಡೆಯಬೇಕಾಗಿತ್ತು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯಗಳಿದ್ದರೆ ಚೆನ್ನಾಗಿತ್ತು. ಯಾಕೆಂದರೆ ಇದು ಅಷ್ಟು ಮಹತ್ವದ ಪಟ್ಟವಾಗಿದೆ. ಟೆಸ್ಟ್ ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸಲು ಐಸಿಸಿ ಇದನ್ನು ನಡೆಸುತ್ತಿದೆ. ಹೀಗಾಗಿ ಬೆಸ್ಟ್ ಆಫ್ ತ್ರಿ ಫೈನಲ್ ಪಂದ್ಯವಿದ್ದರೆ ಜನರಿಗೆ ಇನ್ನೂ ಹೆಚ್ಚಿನ ಮನರಂಜನೆ ಲಭಿಸುತ್ತಿತ್ತು ಎಂದು ಕಪಿಲ್ ದೇವ್ ಹೇಳಿದ್ದಾರೆ. ಅಂದರೆ ಟೆಸ್ಟ್ ವಿಶ್ವಕಪ್ನಲ್ಲಿ 3 ಪಂದ್ಯಗಳನ್ನು ಆಡಿಸಿ 2ರಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ನೀಡಬೇಕಾಗಿತ್ತು ಎಂಬುದು ಕಪಿಲ್ ದೇವ್ ವಾದವಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಜೂನ್ 18ರಿಂದ ಸೌಥಾಂಪ್ಟನ್ನಲ್ಲಿ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, 5 ದಿನಗಳ ಪಂದ್ಯ ಡ್ರಾಗೊಂಡರೆ ಉಭಯ ತಂಡಗಳಿಗೂ ಟ್ರೋಫಿ ಹಂಚುವ ಯೋಜನೆಯನ್ನೂ ಐಸಿಸಿ ಹೊಂದಿದೆ. ಫೈನಲ್ ಪಂದ್ಯ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲೇ ನಡೆಯುತ್ತಿದ್ದರೆ ಚೆನ್ನಾಗಿತ್ತು ಎಂದೂ ಕಪಿಲ್ ದೇವ್ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡವೇ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದೆ. ಆದರೆ ಇಂಗ್ಲೆಂಡ್ನ ವೇಗದ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ನ್ಯೂಜಿಲೆಂಡ್ ತಂಡದ ಬೌಲಿಂಗ್ ದಾಳಿಯನ್ನು ಭಾರತ ಹೇಗೆ ಎದುರಿಸಿ ನಿಲ್ಲಲಿದೆ ಎಂಬುದು ನಿರ್ಣಾಯಕವೆನಿಸಲಿದೆ ಎಂದಿದ್ದಾರೆ ಕಪಿಲ್ ದೇವ್.