ಕಾರು ಅಪಘಾತದಲ್ಲಿ ಪವಾಡವೆಂಬಂತೆ ಟೀಮ್​ ಇಂಡಿಯಾದ ಮಾಜಿ ವೇಗಿ ಪ್ರವೀಣ್​ ಕುಮಾರ್ ಪಾರು! ಪುತ್ರನೂ ಬಚಾವ್​ ​

Praveen Kumar
Published on

ನವದೆಹಲಿ: ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಮೀರತ್​ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಟೀಮ್​ ಇಂಡಿಯಾದ ಮಾಜಿ ವೇಗಿ ಪ್ರವೀಣ್​ ಕುಮಾರ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.​

ಪ್ರವೀಣ್​ ಕುಮಾರ್​ ಅವರು 2007 ರಿಂದ 2012ರವರೆಗೆ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಇವರು ಮೀರತ್​ನ ಮುಲ್ತಾನ್​ ನಗರದಲ್ಲಿ ವಾಸವಿದ್ದಾರೆ. ತಮ್ಮ ಪುತ್ರನೊಂದಿಗೆ ಲ್ಯಾಂಡ್​ ರೋವರ್​ ಡಿಫೆಂಡರ್​ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕ್ಯಾಂಟರ್​ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡಿದೆ.

ಅದೃಷ್ಟವಶಾತ್​ 36 ವರ್ಷದ ಪ್ರವೀಣ್​ ಕುಮಾರ್​ ಮತ್ತು ಅವರ ಪುತ್ರ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಕ್ಯಾಂಟರ್​ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪ ಕ್ಯಾಂಟರ್​ ಚಾಲಕನ ವಿರುದ್ಧ ಕೇಳಿಬಂದಿದೆ. ಚಾಲಕನ ಮೊಬೈಲ್​ ಫೋನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರವೀಣ್​ ಕುಮಾರ್​ ಅವರ ಅಪಘಾತದ ಸುದ್ದಿಯು ಕಳೆದ ವರ್ಷ ರಿಷಬ್ ಪಂತ್ ಅವರ ಮಾರಣಾಂತಿಕ ಕಾರು ಅಪಘಾತದ ಕ್ಷಣವನ್ನು ಅಭಿಮಾನಿಗಳಿಗೆ ನೆನಪಿಸಿತು. ಕಳೆದ ವರ್ಷ ಡಿಸೆಂಬರ್ 30 ರಂದು ಪಂತ್ ಅವರು ಹೊಸ ವರ್ಷಕ್ಕೆ ಮನೆಗೆ ಹಿಂದಿರುಗುತ್ತಿದ್ದಾಗ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿತ್ತು. ಪಂತ್​ ಅವರು ಸದ್ಯ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net