

ಹೈದರಾಬಾದ್: ಶಾದಿ ಡಾಟ್ ಕಮ್ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಗಿರವಿ ಅಂಗಡಿಯ ಮ್ಯಾನೇಜರ್ನನ್ನು ವಂಚಿಸಿ ಹಣದೊಂದಿಗೆ ಪರಾರಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ವಂಚನೆಗೆ ಒಳಗಾದ ವ್ಯಕ್ತಿಯನ್ನು ರೇವಂತ್ ಎಂದು ಗುರುತಿಸಲಾಗಿದೆ. ಈತ ಪೆದ್ದಪಲ್ಲಿ ಜಿಲ್ಲೆಯ ರಾಮಂಗುಂಡಮ್ ಏರಿಯಾದ ಎನ್‌ಟಿಪಿಸಿ ಕಾಲನಿಯ ಗಿರಿವಿ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊದಲ ಮದುವೆಯ ಬಳಿಕ ಹಲವು ವೈಮನಸ್ಸಿನ ಕಾರಣದಿಂದಾಗಿ ಮೊದಲ ಪತ್ನಿಯೊಂದಿಗೆ ಡಿವೋರ್ಸ್ ಆಯಿತು. ಬಳಿಕ ಎರಡನೇ ಮದುವೆಯಾಗಲು ಮುಂದಾಗಿದ್ದ ರೇವಂತ್‌ಗೆ ಶಾದಿ ಡಾಟ್ ಕಂನಲ್ಲಿ ವಾರಂಗಲ್ ಮೂಲದ ಮಾಯಾಲೇಡಿಯ ಪರಿಚಯವಾಗಿದೆ.
ಮಾಯಾಲೇಡಿಯ ಜತೆಗಿನ ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಪ್ರೇಮಕ್ಕೆ ತಿರುಗಿದೆ. ಇಬ್ಬರು ಆಗಾಗ ಭೇಟಿ ನೀಡುವುದು ಮತ್ತು ಸಲುಗೆಯಿಂದ ಇರುವುದು ಸಾಮಾನ್ಯವಾಗಿತ್ತು. ಬಳಿಕ ರೇವಂತ್ ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದ. ಈಗಾಗಲೇ ತನಗೆ ಮದುವೆ ಆಗಿ ಡಿವೋರ್ಸ್ ಆಗಿರುವ ವಿಚಾರವನ್ನು ತಿಳಿಸಿದ್ದ. ಈ ವೇಳೆ ಸ್ವಲ್ಪವೂ ಯೋಚಿಸದೇ ಮಾಯಾಲೇಡಿ ಓಕೆ ಎಂದಿದ್ದಕ್ಕೆ ರೇವಂತ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದ.
ಇದು ತನ್ನ ಮೊದಲ ಮದುವೆ ಎಂದು ಮಾಯಾಲೇಡಿ, ರೇವಂತ್ನನ್ನು ನಂಬಿಸಿದ್ದಳು. ಬಳಿಕ ಹಿರಿಯರ ಒಪ್ಪಿಗೆಯನ್ನು ಪಡೆದು ಇಬ್ಬರು ಸರಳವಾಗಿ ಮದುವೆ ಆಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಕೆಲವೇ ದಿನಗಳಲ್ಲಿ ಮಾಯಾ ಲೇಡಿಯ ಮತ್ತೊಂದು ಮುಖ ಕಳಚಿ ಬೀಳಲು ಆರಂಭವಾಯಿತು. ಡ್ರಗ್ಸ್ ಮತ್ತು ಸಿಗರೇಟ್ ಬೇಕು ಅಂತ ಕಿರುಕುಳ ನೀಡಲು ಆರಂಭಿಸಿದಳು. ಆಕೆಯ ವರ್ತನೆಯನ್ನು ಕಂಡು ರೇವಂತ್‌ಗೆ ಏನೂ ಅರ್ಥವಾಗದೆ ಸುಮ್ಮನೇ ಇದ್ದ. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಅಕ್ಕನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ವಾಪಸ್ ಬರಲೇ ಇಲ್ಲ. ಹೋಗುವಾಗ 70 ಸಾವಿರ ರೂ. ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಹೋಗಿರುವುದು ರೇವಂತ್‌ಗೆ ಗೊತ್ತಾಗಿ ಶಾಕ್ ಆಗಿತ್ತು.
ಮರಳಿ ಬಾರದಿದ್ದಾಗ ರೇವಂತ್ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ವಿಚಾರಿದ್ದ. ಈ ವೇಳೆ ಮಾಯಾಲೇಡಿಯ ಅಸಲಿ ಮುಖ ರೇವಂತ್‌ಗೆ ಗೊತ್ತಾಗಿದೆ. ಈಗಾಗಲೇ ಆಕೆ ಮೂರು ಬಾರಿ ಮದುವೆಯಾಗಿದ್ದಳು. ಬಳಿಕ ಆಕೆಯ ವಿಳಾಸ ಪಡೆದು ಅವಳಿರುವ ಕಡೆ ರೇವಂತ್ ಹೋದಾಗ ಆಕೆ ತನ್ನ ಸ್ನೇಹಿತರೊಂದಿಗೆ ಎಂಜಾಯ್ ಮಾಡುವಾಗ ಸಿಕ್ಕಿಬಿದ್ದಳು. ಈ ರೀತಿ ಏಕೆ ಮಾಡಿದೆ ಎಂದು ಪ್ರಶ್ನೆ ಮಾಡಿದಾಗ, ಸ್ನೇಹಿತರೆಲ್ಲ ಸೇರಿ ರೇವಂತ್ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದ್ದಲ್ಲದೆ, ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದಾಳೆ. ಆಕೆಯ ಕಿರುಕುಳ ತಡೆಯಲಾರದೆ ಕೊನೆಗೆ ರೇವಂತ್ ಎನ್‌ಟಿಪಿಸಿ ಪೊಲೀಸರ ಮೊರೆ ಹೋದರು. ಪ್ರಕರಣ ದಾಖಲಿಸಿರುವ ಪೊಲೀಸರು ಇದೀಗ ಮಾಯಾಲೇಡಿಗಾಗಿ ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್)