ನಮ್ಮವರು ಪಾಕಿಸ್ತಾನದ ವಿರುದ್ಧ ಆಡುವ ಬದಲು ಐಪಿಎಲ್​ ಆಡಿದ್ದಿದ್ರೆ… ಪಾಕ್​ನ ಟೀಕಿಸಿದ ಮಾಜಿ ಕ್ರಿಕೆಟಿಗ

WhatsApp Image 2024-05-26 at 3.59.43 PM
Published on

ಇಂಗ್ಲೆಂಡ್​: ನಿನ್ನೆ (ಮೇ.25) ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸುಲಭ ಗೆಲುವು ದಾಖಲಿಸಿದ ಇಂಗ್ಲೆಂಡ್​ ತಂಡದ ಕೆಲವು ಆಟಗಾರರಿಗೆ ಇದೀಗ ಮಾಜಿ ಆಟಗಾರ ಮೈಕೆಲ್ ವಾಘನ್ ಸಲಹೆ ನೀಡಿದ್ದು, ಪರೋಕ್ಷವಾಗಿ ಪಾಕ್​ ಆಟಗಾರರನ್ನು ಟೀಕಿಸಿದ್ದಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಕೆಲಸವನ್ನು ಮೈಕೆಲ್ ಮಾಡಿದ್ದಾರೆ. ಇದು ಅನೇಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ನಾಲ್ಕು ಟಿ20 ಪಂದ್ಯಗಳಲ್ಲಿ ಮೊದಲನೇ ಮ್ಯಾಚ್ ಮಳೆಯಿಂದ ರದ್ದಾಯಿತು. ಇನ್ನು ಎರಡನೇ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕ್​, ಬ್ಯಾಟ್​ ಮಾಡುವಂತೆ ಇಂಗ್ಲೆಂಡ್​ಗೆ ಹೇಳಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 183 ರನ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದ ಪಾಕಿಸ್ತಾನದ ಸ್ಟಾರ್​ ಬ್ಯಾಟ್ಸ್​ಮನ್​ಗಳು, 19.2 ಓವರ್​ಗಳಲ್ಲಿ 160ಕ್ಕೆ ಆಲ್​ಔಟ್​ ಆಗುವ ಮೂಲಕ ಪಂದ್ಯವನ್ನು ಇಂಗ್ಲೆಂಡ್​ಗೆ ಒಪ್ಪಿಸಿದರು.

ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲುತ್ತಿದ್ದಂತೆ ಇಂಗ್ಲೆಂಡ್​ನ ಕೆಲವು ಬ್ಯಾಟ್ಸ್​ಮನ್​ಗಳಿಗೆ ಮತ್ತು ಕ್ರಿಕೆಟ್​ ಮಂಡಳಿಗೆ ಸಲಹೆ ನೀಡಿದ ಮೈಕೆಲ್ ವಾಘನ್, "ಜಾಸ್​ ಬಟ್ಲರ್​, ಫಿಲ್ ಸಾಲ್ಟ್​, ವಿಲ್​ ಜ್ಯಾಕ್ಸ್​ನಂತಹ ಸ್ಟಾರ್​ ಆಟಗಾರರನ್ನು ಇಷ್ಟು ಬೇಗ ಭಾರತದಿಂದ ಕರೆಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಇವರೆಲ್ಲಾ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡುವ ಬದಲಿಗೆ ಐಪಿಎಲ್ ಆಡಿದ್ದಿದ್ರೆ ಎಷ್ಟೋ ಚೆನ್ನಾಗಿರುತ್ತಿತ್ತು. ಅವರವರ ಫ್ರಾಂಚೈಸಿ ಪರ ಆಡಲು ಬಿಟ್ಟಿದಿದ್ದರೆ, ಇಷ್ಟೊತ್ತಿಗೆ ಪ್ಲೇಆಫ್​ ಪ್ರವೇಶಿಸಿದ್ದ ತಮ್ಮ ತಂಡಗಳಿಗೆ ದೊಡ್ಡ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು" ಎಂದು ಹೇಳಿದ್ದಾರೆ.

"ಐಪಿಎಲ್​ನಲ್ಲಿ ಈ ಆಟಗಾರರು ಆಡಿದ ತಂಡಕ್ಕೆ ಅಭಿಮಾನಿಗಳಿಂದ ಹೆಚ್ಚಿನ ಬೆಂಬಲ ಮತ್ತು ಗೆಲುವಿನ ಒತ್ತಡವಿತ್ತು. ಇದನ್ನೆಲ್ಲಾ ನೋಡಿದಾಗ ಪಾಕಿಸ್ತಾನದ ವಿರುದ್ಧದ ಪಂದ್ಯ ಆಡುವ ಬದಲಿಗೆ ಇವರೆಲ್ಲಾ ಐಪಿಎಲ್​ನಲ್ಲಿ ತಮ್ಮ ಫ್ರಾಂಚೈಸಿ ಪರ ಆಡಬೇಕಿತ್ತು" ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಮೈಕೆಲ್​ ಪರೋಕ್ಷವಾಗಿ ಪಾಕಿಸ್ತಾನ ತಂಡದ ಆಟಗಾರರನ್ನು ಟೀಕಿಸಿ​ದ್ದು ಮಾತ್ರ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net