ಈತ ನಾಯಕನಲ್ಲ ತಂಡದಲ್ಲಿ ಸ್ಥಾನ ಪಡೆಯುವುದಕ್ಕೂ ಅರ್ಹನಲ್ಲ; ವೀರೇಂದ್ರ ಸೆಹ್ವಾಗ್​ ಹೀಗಂದಿದ್ಯಾಕೆ

Virender Sehwag
Published on

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್​ ಸಮರ ಆರಂಭವಾಗುವುದಕ್ಕೂ ಮುಂಚೆಯಿಂದಲೇ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್​ ತಂಡವು ಕಳಪೆ ಪ್ರದರ್ಶನದಿಂದ ಟೂರ್ನಿಯಿಂದ ಹೊರಬೀಳುತ್ತದೆ ಎಂಬ ಮುನ್ಸೂಚನೆಯನ್ನು ಮೊದಲೇ ನೀಡಿತ್ತು. ಅದರಂತೆ ಕ್ರಿಕೆಟ್​ ಶಿಶು ಯುಎಸ್​ಎ, ಐರ್ಲೆಂಡ್​ ಹಾಗೂ ಇಂಗ್ಲೆಂಡ್​ ವಿರುದ್ಧ ಸೋಲುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದ ಪಾಕಿಸ್ತಾನ ತಂಡಕ್ಕೀಗ ಸಂಕಷ್ಟ ಎದುರಾಗಿದ್ದು ನಾಯಕ ಮತ್ತು ಆಟಗಾರರ ತಲೆದಂಡವಾಗಬಹುದು ಎಂದು ಹೇಳಲಾಗಿದೆ.

ಈಚೆಗೆ ಐರ್ಲೆಂಡ್​ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಪಾಕ್​ ನಾಯಕ ಬಾಬರ್​ ಅಜಂ ನಾವು ತಂಡವಾಗಿ ಆಡಲಿಲ್ಲ ಎಂದು ಹೇಳುವ ಮೂಲಕ ಪಾಕ್​ ಕ್ರಿಕೆಟ್​ ಟೀಮ್​ನಲ್ಲಿ​ ಎಲ್ಲವೂ ಸರಿ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಟೀಮ್​ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಆತ ನಾಯಕನಲ್ಲ ತಂಡದಲ್ಲಿ ಸ್ಥಾನ ಪಡೆಯಲು ಅರ್ಹನಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸೆಹ್ವಾಗ್​, ನಾ ನೋಡಿದಂತೆ ಬಾಬರ್​ ಅಜಂ ಸ್ಪಿನ್ನರ್​ಗಳಿಗೆ ಮಾತ್ರ ಸಿಕ್ಸರ್​ ಹೊಡೆಯುವ ಆಟಗಾರ. ಈವರೆಗೆ ನಾನು ಕಂಡಂತೆ ವೇಗಿಗಳ ಎದುರಿಗೆ ಆತ ಹೆಚ್ಚು ರನ್​ ಗಳಿಸಿದ್ದನ್ನು ನೋಡಿಲ್ಲ. ಈ ರೀತಿ ಆಡುವುದು ನನ್ನ ಪ್ರಕಾರ ಸರಿಯಲ್ಲ. ಆತ ಎಷ್ಟೇ ರನ್​ ಗಳಿಸಿ ದಾಖಲೆ ಬರೆದರೂ ಸ್ಟ್ರೈಕ್​ರೇಟ್​ ಉತ್ತಮವಾಗಿರುವುದಿಲ್ಲ.

ನಾಯಕನಾಗಿ ತಂಡದ ಪರವಾಗಿ ಉಪಯುಕ್ತ ಆಟವಾಡಿದರೆ ಸೂಕ್ತ. ಇಲ್ಲವಾದಲ್ಲಿ ನಿನ್ನ ಬದಲು ಬೇರೆ ಅವರನ್ನು ಕಳುಹಿಸುವ ಮೂಲಕ ತಂಡಕ್ಕೆ ಸಹಕಾರಿಯಾಗು. ಬಾಬರ್​ ಪಾಕ್​ ತಂಡದ ನಾಯಕನಾಗಲು ಸೂಕ್ತ ಅಲ್ಲ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಪಾಕ್​ ತಂಡದ ನಾಯಕ ಬದಲಾದರೆ ಆತ ತಂಡದಲ್ಲಿ ಸ್ಥಾನ ಪಡೆಯುವುದಕ್ಕೂ ಅಲೆಯಬೇಕಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net