

ಅಹಮದಾಬಾದ್: ಕರೊನಾ ವೈರಸ್ ಭೀತಿಯ ನಡುವೆ ಪುನರಾರಂಭ ಕಂಡಿರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಲೀಗ್ ಹಂತದ ಹಣಾಹಣಿಗಳು ಈಗಾಗಲೆ ಯಶಸ್ವಿಯಾಗಿ ಆಯೋಜನೆಗೊಂಡಿದ್ದು, ಮಂಗಳವಾರದಿಂದ ನಾಕೌಟ್ ಹಂತದಲ್ಲಿ ಪ್ರಶಸ್ತಿ ಹೋರಾಟ ನಡೆಯಲಿವೆ. ಮುಂಬರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯ ದೃಷ್ಟಿಯಿಂದ ಕ್ರಿಕೆಟಿಗರಿಗೆ ಫ್ರಾಂಚೈಸಿಗಳ ಗಮನ ಸೆಳೆಯಲು ಇದೊಂದು ಉತ್ತಮ ಅವಕಾಶವಾಗಿದೆ.
ಲೀಗ್ ಹಂತದ ಕಾದಾಟದಲ್ಲಿ ನಿರೀಕ್ಷಿತ ನಿರ್ವಹಣೆ ತೋರದಿದ್ದರೂ, ಅದೃಷ್ಟದ ಲೆಕ್ಕಾಚಾರದಲ್ಲಿ ಮೇಲುಗೈ ಪಡೆದು ಕೊನೇಕ್ಷಣದಲ್ಲಿ ನಾಕೌಟ್ ಹಂತಕ್ಕೇರಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸತತ 3ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ಹಂಬಲದಲ್ಲಿದೆ. ಕರುಣ್ ನಾಯರ್ ಸಾರಥ್ಯದ ರಾಜ್ಯ ತಂಡ ಮೊದಲ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ಎ ಗುಂಪಿನಲ್ಲಿ ತನ್ನ ಜತೆಗೇ ಇದ್ದ ಪಂಜಾಬ್ ವಿರುದ್ಧ ಲೀಗ್ ಹಂತದಲ್ಲಿ ಕಂಡಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೂ ಕರ್ನಾಟಕ ತಂಡದ ಮುಂದಿದೆ.
ಪಂಜಾಬ್ ತಂಡ ಲೀಗ್ ಹಂತದಲ್ಲಿ ಆಡಿದ ಎಲ್ಲ 5 ಪಂದ್ಯಗಳಲ್ಲಿ ಗೆದ್ದು ಎ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್ ಹಂತಕ್ಕೇರಿದ್ದರೆ, ಕರ್ನಾಟಕ ತಂಡ ಉಳಿದ 4 ಪಂದ್ಯ ಗೆದ್ದರೂ ಪಂಜಾಬ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಆದರೆ ಅದೃಷ್ಟ ಜತೆಗಿದ್ದ ಕಾರಣ, ಕರ್ನಾಟಕ ತಂಡ ಗುಂಪಿನಲ್ಲಿ 2ನೇ ಸ್ಥಾನ ಪಡೆದರೂ, ರನ್‌ರೇಟ್ ಲೆಕ್ಕಾಚಾರದಲ್ಲಿ ಇತರ ಗುಂಪಿನ 2ನೇ ಸ್ಥಾನಿ ತಂಡಗಳನ್ನು (ಹಿಮಾಚಲ ಪ್ರದೇಶ ಹೊರತಾಗಿ) ಹಿಂದಿಕ್ಕಿ ಪ್ರಶಸ್ತಿ ಉಳಿಸಿಕೊಳ್ಳುವ ಆಸೆಯನ್ನು ಜೀವಂತವಿರಿಸಿತ್ತು.
ಪಂಜಾಬ್‌ಗೆ ಪಂಚ್ ನೀಡೀತೇ ಕರ್ನಾಟಕ?
ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಸಾಕಷ್ಟು ಆಟಗಾರರನ್ನು ಹೊಂದಿರುವ ಕರ್ನಾಟಕ ಮತ್ತು ಪಂಜಾಬ್ ತಂಡಗಳ ಮುಖಾಮುಖಿ ಜಿದ್ದಾಜಿದ್ದಿನ ಹೋರಾಟದಿಂದ ಕೂಡಿರುವ ನಿರೀಕ್ಷೆ ಇದೆ. ಬೆಂಗಳೂರು ಹೊರವಲಯದ ಆಲೂರಿನಲ್ಲಿ ನಡೆದ ಲೀಗ್ ಹಂತದ ಕಾದಾಟದಲ್ಲಿ ಕರ್ನಾಟಕ ತಂಡ 9 ವಿಕೆಟ್‌ಗಳಿಂದ ಹೀನಾಯವಾಗಿ ಸೋಲು ಕಂಡಿತ್ತು. ಪ್ರಮುಖವಾಗಿ ಬ್ಯಾಟಿಂಗ್ ವಿಭಾಗದ ವೈಲ್ಯ ರಾಜ್ಯ ತಂಡಕ್ಕೆ ಹೊಡೆತ ನೀಡಿದೆ. ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಮನೀಷ್ ಪಾಂಡೆ ಗೈರಿನಲ್ಲಿ ರಾಜ್ಯ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್‌ಗಳ ಕೊರತೆ ಕಾಡುತ್ತಿದೆ. ಆಟಗಾರರ ಅಸ್ಥಿರ ನಿರ್ವಹಣೆಯೂ ಹಿನ್ನಡೆಯಾಗಿ ಪರಿಣಮಿಸಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಿಂಚಿದ್ದ ಯುವ ಎಡಗೈ ಆರಂಭಿಕ ದೇವದತ್ ಪಡಿಕಲ್ ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಅಬ್ಬರಿಸಿದ್ದರು. ಮತ್ತೊಂದೆಡೆ ಪಂಜಾಬ್ ತಂಡ ಸಿಮ್ರಾನ್ ಸಿಂಗ್ ಮತ್ತು ಅಭಿಷೇಕ್ ಶರ್ಮರ ಭರ್ಜರಿ ಬ್ಯಾಟಿಂಗ್‌ನ ಬಲ ಹೊಂದಿದೆ. ಬೌಲಿಂಗ್ ವಿಭಾಗದಲ್ಲೂ ಸಿದ್ಧಾರ್ಥ್ ಕೌಲ್, ಅರ್ಷದೀಪ್ ಸಿಂಗ್ ಮತ್ತು ಹರ್‌ಪ್ರೀತ್ ಬ್ರಾರ್ ಮಿಂಚುತ್ತಿದ್ದಾರೆ. ಇವೆಲ್ಲದರ ನಡುವೆ ಕರ್ನಾಟಕ ತಂಡ ಸಂಘಟಿತ ನಿರ್ವಹಣೆ ತೋರಿದರೆ ಉಪಾಂತ್ಯಕ್ಕೇರುವ ಅತ್ಯುತ್ತಮ ಅವಕಾಶ ಹೊಂದಿದೆ.
ಟಿ20 ಮುಖಾಮುಖಿ: 5, ಕರ್ನಾಟಕ: 2, ಪಂಜಾಬ್: 3.
ಸಂಭಾವ್ಯ ತಂಡಗಳು:
ಕರ್ನಾಟಕ: ದೇವದತ್ ಪಡಿಕಲ್, ರೋಹನ್ ಕದಂ, ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ, ಕೆಎಲ್ ಶ್ರೀಜಿತ್ (ವಿ.ಕೀ), ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಜೆ. ಸುಚಿತ್/ಪ್ರವೀಣ್ ದುಬೆ, ಪ್ರಸಿದ್ಧಕೃಷ್ಣ.
ಪಂಜಾಬ್: ಸಿಮ್ರಾನ್ ಸಿಂಗ್ (ವಿ.ಕೀ), ಅಭಿಷೇಕ್ ಶರ್ಮ, ಮಂದೀಪ್ ಸಿಂಗ್ (ನಾಯಕ), ಗುರುಕೀರತ್ ಸಿಂಗ್, ಅನ್ಮೋಲ್‌ಪ್ರೀತ್ ಸಿಂಗ್, ರಮಣ್‌ದೀಪ್ ಸಿಂಗ್, ಹರ್‌ಪ್ರೀತ್ ಬ್ರಾರ್, ಮಯಾಂಕ್ ಮಾರ್ಕಂಡೆ, ಸಂದೀಪ್ ಶರ್ಮ, ಅರ್ಷದೀಪ್ ಸಿಂಗ್, ಸಿದ್ಧಾರ್ಥ್ ಕೌಲ್.
ಒತ್ತಡದಲ್ಲಿ ಕರುಣ್ ನಾಯರ್
ಪ್ರಮುಖ ಆಟಗಾರರ ಗೈರಿನಲ್ಲಿ ತಂಡವನ್ನು ಮುನ್ನಡೆಸುವ ಹೊಣೆಯನ್ನೂ ಹೊತ್ತುಕೊಂಡಿರುವ ಬ್ಯಾಟ್ಸ್‌ಮನ್ ಕರುಣ್ ನಾಯರ್, ಕಳೆದ ಕೆಲ ಸಮಯದ ರನ್‌ಬರವನ್ನು ಮುಂದುವರಿಸಿದ್ದಾರೆ. ಲೀಗ್ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ ಗರಿಷ್ಠ 27 ರನ್ ಸಹಿತ 81 ರನ್‌ಗಳನ್ನಷ್ಟೇ ಗಳಿಸಿದ್ದರು. ಆರಂಭಿಕನ ಸ್ಥಾನದಿಂದ ಮಧ್ಯಮ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದಿದ್ದರೂ, ಅವರು ಫಾರ್ಮ್‌ಗೆ ಮರಳಿರಲಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ ಏಕಮಾತ್ರ ಭಾರತೀಯರೆನಿಸಿರುವ 29 ವರ್ಷದ ಕರುಣ್, ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲೂ ಹೆಚ್ಚಿನ ರನ್ ಗಳಿಸಲು ವಿಫಲರಾಗಿದ್ದರು. ನಾಕೌಟ್ ಹಂತದಲ್ಲೂ ಅವರು ಸುಧಾರಿತ ನಿರ್ವಹಣೆ ತೋರಲು ಸಲರಾಗದಿದ್ದರೆ, ನಾಯಕತ್ವ ಮಾತ್ರವಲ್ಲದೆ ರಾಜ್ಯ ತಂಡದಲ್ಲಿ ಸ್ಥಾನವನ್ನೂ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಇತ್ತೀಚೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದಲೂ ಬಿಡುಗಡೆಗೊಂಡಿರುವ ಕರುಣ್, ಐಪಿಎಲ್‌ನಲ್ಲಿ ಬೇರೊಂದು ತಂಡದಿಂದ ಅವಕಾಶ ಒಲಿಸಿಕೊಳ್ಳುವ ದೃಷ್ಟಿಯಿಂದಲೂ ಶೀಘ್ರ ಬ್ಯಾಟಿಂಗ್ ಲಯಕ್ಕೆ ಮರಳುವುದು ಅಗತ್ಯವಾಗಿದೆ.
ಸರ್ದಾರ್ ಕ್ರೀಡಾಂಗಣದಲ್ಲಿ ಪಂದ್ಯಗಳು
ವಿಶ್ವ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿರುವ ಅಹಮದಾಬಾದ್‌ನ ಸರ್ದಾರ್ ಪಟೇಲ್ ಮೊಟೆರಾ ಸ್ಟೇಡಿಯಂನಲ್ಲಿ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ. ಇದು ಈ ಹೊಸ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಾಗಿರಲಿವೆ. ಕಳೆದ ವರ್ಷ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದಾಗ ಇದೇ ಕ್ರೀಡಾಂಗಣದಲ್ಲಿ ಬೃಹತ್ ಸಮಾರಂಭವೊಂದು ನಡೆದಿತ್ತು. ಕ್ರೀಡಾಂಗಣ ಬರೋಬ್ಬರಿ 1.1 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಆದರೆ ಕರೊನಾ ಭೀತಿಯಿಂದಾಗಿ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಮುಂಬರುವ ಭಾರತ-ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸರಣಿಯಲ್ಲಿ ಕೊನೇ 2 ಟೆಸ್ಟ್ ಮತ್ತು 5 ಟಿ20 ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ನಡೆಯಲಿವೆ. ಹೀಗಾಗಿ ಆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪೂರ್ವಭಾವಿಯಾಗಿ ಇಲ್ಲಿನ ಪಿಚ್‌ಗಳ ವರ್ತನೆಯನ್ನು ತಿಳಿದುಕೊಳ್ಳಲು ಕೂಡ ದೇಶೀಯ ಟಿ20 ಪಂದ್ಯಗಳು ಸಹಾಯಕವಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಕ್ರೀಡಾಂಗಣದ ಮರುನಿರ್ಮಾಣದ ಯೋಜನೆಯನ್ನು ರೂಪಿಸಿದ್ದರು.
ನಾಕೌಟ್ ವೇಳಾಪಟ್ಟಿ
*ಕ್ವಾರ್ಟರ್ಫೈನಲ್ಸ್:
ಜನವರಿ 26, ಮಂಗಳವಾರ
1. ಕರ್ನಾಟಕ-ಪಂಜಾಬ್
ಆರಂಭ: ಮಧ್ಯಾಹ್ನ 12.00
2. ತಮಿಳುನಾಡು-ಹಿಮಾಚಲ ಪ್ರದೇಶ
ಆರಂಭ: ಸಂಜೆ 7.00
ಜನವರಿ 27, ಬುಧವಾರ
3. ಹರಿಯಾಣ-ಬರೋಡ
ಆರಂಭ: ಮಧ್ಯಾಹ್ನ 12.00
4. ಬಿಹಾರ-ರಾಜಸ್ಥಾನ
ಆರಂಭ: ಸಂಜೆ 7.00
*ಸೆಮಿಫೈನಲ್ಸ್
ಜನವರಿ 29, ಶುಕ್ರವಾರ
2-4 ಕ್ವಾರ್ಟರ್ಫೈನಲ್ ವಿಜೇತರು
ಆರಂಭ: ಮಧ್ಯಾಹ್ನ 12.00
1-3 ಕ್ವಾರ್ಟರ್ಫೈನಲ್ ವಿಜೇತರು
ಆರಂಭ: ಸಂಜೆ 7.00
*ಫೈನಲ್
ಜನವರಿ 31, ಭಾನುವಾರ
ಆರಂಭ: ಸಂಜೆ 7.00
*ಎಲ್ಲಿ: ಅಹಮದಾಬಾದ್
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್