More

    ಆಸೀಸ್ ನೆಲದ ಯಶಸ್ಸಿನ ಗುಟ್ಟು ಬಿಚ್ಚಿಡುತ್ತಿದ್ದಾರೆ ಟೀಮ್ ಇಂಡಿಯಾ ಕ್ರಿಕೆಟಿಗರು

    ಬೆಂಗಳೂರು: ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಲ್ಲ ರೀತಿಯ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಸಾಧನೆ ತೋರಿತು. ಈ ಮೂಲಕ ಎಲ್ಲರ ನಿರೀಕ್ಷೆಗಳನ್ನು ಮೀರಿ ನಿಂತಿತು. ಬಾರ್ಡರ್-ಗಾವಸ್ಕರ್ ಟ್ರೋಫಿಯೊಂದಿಗೆ ತವರಿಗೆ ಮರಳಿರುವ ಭಾರತ ತಂಡ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕೆಲ ಆಟಗಾರರು ಮತ್ತು ತಂಡದ ತರಬೇತಿ ಸಿಬ್ಬಂದಿ ವರ್ಗದವರು, ಯಶಸ್ಸಿನ ಹಿಂದಿರುವ ಶ್ರಮ, ಸ್ಫೂರ್ತಿ ಮತ್ತು ಕೆಲವು ಗೊತ್ತಿರದ ಸಂಗತಿಗಳನ್ನು ಬಿಚ್ಚಿಡುತ್ತಿದ್ದಾರೆ. ಅದರ ಸಂಕ್ಷಿಪ್ತ ವಿವರ ಇಲ್ಲಿದೆ…

    ಗಿಲ್ ಯಶಸ್ಸಿನ ಹಿಂದೆ ಯುವಿ ಪಾತ್ರ
    ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 2 ಅರ್ಧಶತಕಗಳ ಸಹಿತ 259 ರನ್ ಸಿಡಿಸಿ ಮಿಂಚಿದ ಪಂಜಾಬ್‌ನ ಯುವ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್, ತಮ್ಮ ಬ್ಯಾಟಿಂಗ್ ಕೌಶಲ ಸುಧಾರಣೆಯಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪಾಲು ಇದೆ ಎಂದಿದ್ದಾರೆ. ಐಪಿಎಲ್‌ಗೂ ಮುನ್ನ ಯುವರಾಜ್ ಸಿಂಗ್ ಜತೆಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದೆ. ಆಗ ಅವರು ಆಸೀಸ್ ಪ್ರವಾಸದಲ್ಲಿ ಬ್ಯಾಟಿಂಗ್ ಮಾಡಬೇಕಾದ ಬಗ್ಗೆ ಕೆಲ ಉಪಯುಕ್ತ ಟಿಪ್ಸ್‌ಗಳನ್ನು ನೀಡಿದ್ದರು. ಅವರು ನನಗೆ ವಿವಿಧ ಆ್ಯಂಗಲ್‌ಗಳಿಂದ ನೂರಾರು ಶಾರ್ಟ್ ಪಿಚ್ ಎಸೆತಗಳನ್ನು (ಥ್ರೋಡೌನ್) ಎಸೆದಿದ್ದರು. ಅದು ಆಸೀಸ್ ಪ್ರವಾಸದಲ್ಲಿ ಸಾಕಷ್ಟು ನೆರವಾಯಿತು ಎಂದು 21 ವರ್ಷದ ಗಿಲ್ ವಿವರಿಸಿದ್ದಾರೆ.

    ಇದನ್ನೂ ಓದಿ: ಆಸೀಸ್ ಪ್ರವಾಸದಲ್ಲಿ ಮಿಂಚಿದ 6 ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಮಹೀಂದ್ರಾ

    ಎಡಚನಾಗಿರುವುದು ಲಾಭ ತಂದಿದೆ
    ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರೂ ಪ್ರಕಾರದ ಕ್ರಿಕೆಟ್‌ನಲ್ಲಿ ಭಾರತ ಪರ ಪದಾರ್ಪಣೆ ಮಾಡುವ ಮೂಲಕ ವಿಶೇಷ ದಾಖಲೆ ಬರೆದ ತಮಿಳುನಾಡಿನ ಎಡಗೈ ವೇಗಿ ಟಿ. ನಟರಾಜನ್, ಎಡಚನಾಗಿರುವುದು ತನಗೆ ಲಾಭ ತಂದಿದೆ ಎಂದಿದ್ದಾರೆ. ‘ನಾನು ಮೂರೂ ಪ್ರಕಾರದಲ್ಲಿ ಆಡಲು ಪ್ರಮುಖ ಕಾರಣ ನನ್ನ ಅಭ್ಯಾಸ ಮತ್ತು ಎಲ್ಲ ಕೋಚ್‌ಗಳ ಮಾರ್ಗದರ್ಶನ. ಎಡಗೈ ಬೌಲರ್ ಆಗಿರುವುದು ಕೂಡ ನನಗೆ ಲಾಭ ತಂದುಕೊಟ್ಟಿತು. ಯಾಕೆಂದರೆ ಈಗ ಭಾರತದಲ್ಲಿ ಹೆಚ್ಚಿನ ಎಡಗೈ ವೇಗಿಗಳಿಲ್ಲ’ ಎಂದು ಟಿ. ನಟರಾಜನ್ ತಿಳಿಸಿದ್ದಾರೆ. ತಮಿಳುನಾಡಿನವರೇ ಆದ ಸ್ಪಿನ್ನರ್ ಆರ್. ಅಶ್ವಿನ್ ಅವರು ನೀಡಿದ ಸಲಹೆಗಳು ಕೂಡ ಪ್ರವಾಸದಲ್ಲಿ ನೆರವಾದವು. ತಮಿಳುನಾಡು ಪರವಾಗಿಯೂ ನಾವು ಸಾಕಷ್ಟು ಪಂದ್ಯಗಳನ್ನು ಜತೆಯಾಗಿ ಆಡಿದ್ದೆವು. ಅವರು ನನ್ನನ್ನು ಪ್ರೀತಿಯಿಂದ ನಟ್ಟು ಎಂದೇ ಕರೆಯುತ್ತಾರೆ ಎಂದೂ ತಿಳಿಸಿದ್ದಾರೆ.

    ನಟರಾಜನ್ ಬಳಿ ಬ್ಯಾಟ್-ಪ್ಯಾಡ್ ಇರಲಿಲ್ಲ
    ಆಸೀಸ್ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದ ವೇಗಿ ಟಿ. ನಟರಾಜನ್, ಬಳಿಕ ಗಾಯಾಳು ಆಟಗಾರರ ಬದಲಿಗೆ ಆಡುವ ಬಳಗದಲ್ಲೂ ಕಾಣಿಸಿಕೊಂಡಿದ್ದರು. ಆದರೆ ನೆಟ್ ಬೌಲರ್ ಆಗಿ ಹೋಗಿದ್ದ ಕಾರಣ ಅವರು, ಬೌಲಿಂಗ್ ಸ್ಪೈಕ್ಸ್‌ಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದರು. ಬ್ಯಾಟ್ ಮತ್ತು ಪ್ಯಾಡ್‌ಗಳು ಅವರ ಬಳಿ ಇರಲಿಲ್ಲ. ಹೀಗಾಗಿ ಪ್ರಧಾನ ತಂಡದಲ್ಲಿ ಸ್ಥಾನ ಪಡೆದಾಗ ಅವರು ಬೇರೆಯವರಿಂದ ಇದನ್ನು ಪಡೆದುಕೊಳ್ಳಬೇಕಾಯಿತು ಎಂದು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಬಹಿರಂಗಪಡಿಸಿದ್ದಾರೆ.

    ಬೆರಳು ಮುರಿದಿದ್ದರೂ, ಬ್ಯಾಟಿಂಗ್‌ಗೆ ಸಜ್ಜಾಗಿದ್ದ ಜಡೇಜಾ
    ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೇಳೆ ಚೆಂಡೇಟಿನಿಂದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಕೈ ಹೆಬ್ಬೆರಳು ಮುರಿತವಾಗಿತ್ತು. ಇದರ ನಡುವೆಯೂ ಅವರು 2ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಪ್ಯಾಡ್ ಕಟ್ಟಿಕೊಂಡು ಸಜ್ಜಾಗಿದ್ದರು. ಅಲ್ಲದೆ ನೋವು ನಿವಾರಕ ಚುಚ್ಚುಮದ್ದು ತೆಗೆದುಕೊಂಡು ಕನಿಷ್ಠ 10-15 ಓವರ್ ಬ್ಯಾಟಿಂಗ್ ಮಾಡಲು ಕೂಡ ಮಾನಸಿಕವಾಗಿ ಸಜ್ಜಾಗಿದ್ದರು. ಸ್ವತಃ ರವೀಂದ್ರ ಜಡೇಜಾ ಈ ವಿಷಯವನ್ನು ಹೇಳಿಕೊಂಡಿದ್ದು, ಗಾಯದ ನಡುವೆ ನಾನು ಯಾವ ರೀತಿಯ ಹೊಡೆತಗಳನ್ನು ಬಾರಿಸಬಹುದು ಮತ್ತು ಯಾವ ರೀತಿಯ ಹೊಡೆತಗಳನ್ನು ಬಾರಿಸಬಾರದು ಎಂಬ ಬಗ್ಗೆಯೂ ಚಿಂತಿಸುತ್ತ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಿದ್ದೆ ಎಂದು ಹೇಳಿದ್ದಾರೆ. ಆದರೆ ಹನುಮ ವಿಹಾರಿ ಮತ್ತು ಆರ್. ಅಶ್ವಿನ್ ಜೋಡಿ 256 ಎಸೆತ ಎದುರಿಸಿ ಭಾರತಕ್ಕೆ ಪಂದ್ಯ ಡ್ರಾ ಸಾಧಿಸಲು ನೆರವಾಗಿದ್ದರು.

    ಇದನ್ನೂ ಓದಿ: ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?

    ಬೌನ್ಸರ್‌ಗೆ ಹೆದರುತ್ತಿದ್ದರು ಶುಭಮಾನ್ ಗಿಲ್
    ಆಸೀಸ್ ವೇಗಿಗಳನ್ನು ದಿಟ್ಟವಾಗಿ ಎದುರಿಸಿರುವ ಆರಂಭಿಕ ಶುಭಮಾನ್ ಗಿಲ್, ಈ ಹಿಂದೆ ಬೌನ್ಸರ್‌ಗಳಿಗೆ ಹೆದರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಆ ಹೆದರಿಕೆಯನ್ನು ನಿವಾರಿಸಿಕೊಂಡ ರೀತಿಯನ್ನೂ ತಿಳಿಸಿದ್ದಾರೆ. ‘ನಾನು ಯುವಕನಾಗಿದ್ದಾಗ ಬೌನ್ಸರ್‌ಗಳಿಗೆ ಹೆದರುತ್ತಿದ್ದೆ. ಚೆಂಡಿನಿಂದ ಏಟು ತಿಂದ ಬಳಿಕ ಭಯ ದೂರವಾಯಿತು. ಹೊಡೆತ ತಿನ್ನುವವರೆಗೆ ಮಾತ್ರ ಹೆದರಿಕೆ ಇರುತ್ತದೆ. ಆದರೆ ಏಟು ಬಿದ್ದ ಬಳಿಕ ಅದು ಸಾಮಾನ್ಯ ಎನಿಸುತ್ತದೆ. ಬಳಿಕ ಭಯ ಸಂಪೂರ್ಣ ದೂರವಾಗುತ್ತದೆ’ ಎಂದು ಗಿಲ್ ಕೆಕೆಆರ್ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

    ಪಂತ್ ಯಶಸ್ಸಿನಲ್ಲಿ ರೈನಾ ಕೊಡುಗೆ
    ಲಾಕ್‌ಡೌನ್ ಬಳಿಕ ನಿಧಾನವಾಗಿ ಕ್ರೀಡಾ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ದೊರೆತಾಗ ಸುರೇಶ್ ರೈನಾ ಮತ್ತು ರಿಷಭ್ ಪಂತ್ ಜೂನ್‌ನಲ್ಲಿ ಗಾಜಿಯಾಬಾದ್ ಮತ್ತು ದೆಹಲಿಯಲ್ಲಿ ಜತೆಯಾಗಿ ಅಭ್ಯಾಸ ನಡೆಸಿದ್ದರು. ಆ ವೇಳೆ ಪಂತ್, ‘ಭೈಯಾ, ನಾನು ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಲು ಬಯಸಿರುವೆ’ ಎಂದು ಹೇಳಿದ್ದನ್ನು ಸುರೇಶ್ ರೈನಾ ನೆನಪಿಸಿಕೊಂಡಿದ್ದಾರೆ. ರೈನಾ ಜತೆಗೆ ಫಿಟ್ನೆಸ್ ತರಬೇತಿಯಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ, ಅವರ ಕುಟುಂಬದ ಜತೆಗೂ ಪಂತ್ ಹೆಚ್ಚಿನ ಸಮಯ ಕಳೆದಿದ್ದರು. ಆ ಸಮಯದಲ್ಲಿ ಪಂತ್ ಬ್ಯಾಟಿಂಗ್ ಉತ್ತಮ ಲಯದಲ್ಲಿರಲಿಲ್ಲ. ಆದರೆ ರೈನಾ ಜತೆಗೆ ಕಳೆದ ಉತ್ತಮ ಸಮಯದಿಂದ ಪಂತ್ ಒತ್ತಡರಹಿತವಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಪಂತ್‌ಗೆ ನಾನು ಹೆಚ್ಚೇನೂ ಸಲಹೆಗಳನ್ನು ನೀಡಬೇಕಾಗಿರಲಿಲ್ಲ. ಅವರು ಅಪಾರ ಪ್ರತಿಭಾನ್ವಿತ ಆಟಗಾರರಾಗಿದ್ದಾರೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

    ವಾಷಿಂಗ್ಟನ್‌ಗೆ ಸ್ಫೂರ್ತಿ ತುಂಬಿದ ರವಿಶಾಸ್ತ್ರಿ
    ವಿಶೇಷಜ್ಞ ಸ್ಪಿನ್ ಬೌಲರ್ ಆಗಿ ಭಾರತ ತಂಡಕ್ಕೆ ಎಂಟ್ರಿಕೊಟ್ಟಿದ್ದ ರವಿಶಾಸ್ತ್ರಿ, ಬಳಿಕ ಬ್ಯಾಟಿಂಗ್‌ನಲ್ಲಿ ತೋರಿದ ದಿಟ್ಟ ನಿರ್ವಹಣೆಗಾಗಿ ಟೆಸ್ಟ್ ತಂಡದ ಆರಂಭಿಕರಾಗಿಯೂ ಆಡಿದ್ದರು. ವಾಷಿಂಗ್ಟನ್ ಸುಂದರ್ ಅವರು ಕೂಡ ಈಗ ಅದೇ ರೀತಿಯಲ್ಲಿ ಸಾಗಿ ಮುಂದೊಂದು ದಿನ ಟೆಸ್ಟ್ ತಂಡದ ಆರಂಭಿಕರಾಗಿ ಆಡುವ ಹಂಬಲ ವ್ಯಕ್ತಪಡಿಸಿದ್ದಾರೆ. ಆಸೀಸ್ ಪ್ರವಾಸದ ಪದಾರ್ಪಣೆ ಟೆಸ್ಟ್‌ನಲ್ಲಿ ಸ್ಪಿನ್ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದ ವಾಷಿಂಗ್ಟನ್ ಈಗ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ತಮ್ಮ ಆಡುವ ದಿನಗಳ ಅನುಭವವನ್ನು ಹಂಚಿಕೊಂಡ ಬಳಿಕ ಅವರಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಆಸೀಸ್‌ನಲ್ಲಿ ಭಾರತದ ದಿಗ್ವಿಜಯಕ್ಕೆ ಪಾಕ್ ಕ್ರಿಕೆಟಿಗರಿಂದಲೂ ಪ್ರಶಂಸೆ

    ಗಾಯದ ನಡುವೆ ಬೌಲಿಂಗ್ ಮಾಡಿದ್ದ ಸೈನಿ
    ವೇಗಿ ನವದೀಪ್ ಸೈನಿ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್ ವೇಳೆ ಗಾಯಗೊಂಡು ಡ್ರೆಸ್ಸಿಂಗ್ ರೂಂಗೆ ಮರಳಿದ್ದರು. ಇದು ಭಾರತ ತಂಡಕ್ಕೆ ಸಾಕಷ್ಟು ಹೊಡೆತ ನೀಡಿತ್ತು. ಬಳಿಕ ಅವರು 2ನೇ ಇನಿಂಗ್ಸ್‌ನಲ್ಲಿ ಗಾಯದ ನಡುವೆಯೂ ಬೌಲಿಂಗ್ ಮಾಡಿದ್ದರು. ‘ಅಜಿಂಕ್ಯ ಭೈಯಾ (ರಹಾನೆ) ಗಾಯದ ನಡುವೆಯೂ ಬೌಲಿಂಗ್ ಮಾಡಬಹುದೇ ಎಂದು ಕೇಳಿಕೊಂಡಿದ್ದರು. ನಾನಾಗ ಆಯಿತು ಎಂದು ಹೇಳಿದ್ದೆ. ತಂಡದ ನಾಯಕ ಬಂದು ಕೇಳಿದಾಗ ನನಗೆ ಇಲ್ಲ ಎನ್ನಲಾಗಲಿಲ್ಲ’ ಎಂದು ಸೈನಿ ಹೇಳಿದ್ದಾರೆ.

    ಧೋನಿಗೆ ಹೋಲಿಸಬೇಡಿ, ನಾನೇ ಹೆಸರು ಮಾಡುವೆ
    ಎಂಎಸ್ ಧೋನಿ ಅವರಂಥ ದಿಗ್ಗಜ ಆಟಗಾರನ ಜತೆಗೆ ಹೋಲಿಕೆ ಮಾಡಿದಾಗ ನನಗೆ ಖುಷಿಯಾಗುತ್ತದೆ. ಆದರೆ ನಾನು ಯಾರೊಂದಿಗೂ ಹೋಲಿಸಿಕೊಳ್ಳಲು ಬಯಸುವುದಿಲ್ಲ. ಯಾಕೆಂದರೆ ದಿಗ್ಗಜರನ್ನು ಯುವ ಆಟಗಾರರ ಜತೆ ಹೋಲಿಸುವುದು ಸರಿಯಲ್ಲ. ನಾನು ಭಾರತೀಯ ಕ್ರಿಕೆಟ್‌ನಲ್ಲಿ ನನ್ನದೇ ಆದ ಹೆಸರು ಮಾಡಲು ಬಯಸಿರುವೆ ಎಂದು 23 ವರ್ಷದ ರಿಷಭ್ ಪಂತ್ ಹೇಳಿದ್ದಾರೆ. ಪಂತ್ ಅಮೋಘ ಆಟದಿಂದ ಭಾರತ ಬ್ರಿಸ್ಬೇನ್‌ನಲ್ಲಿ ಯಶಸ್ವಿ ಚೇಸಿಂಗ್ ಮಾಡಿತ್ತು.

    ಮೆಲ್ಬೋರ್ನ್ ಶತಕ ವಿಶೇಷ ಎಂದ ರಹಾನೆ
    ಅಡಿಲೇಡ್‌ನಲ್ಲಿ ಭಾರತ ತಂಡ 36 ರನ್‌ಗೆ ಕುಸಿದು ಸೋಲು ಕಂಡ ಬಳಿಕ ಮೆಲ್ಬೋರ್ನ್‌ನಲ್ಲಿ ಅಮೋಘ ಶತಕ ಸಿಡಿಸಿ ಗೆಲುವು ತಂದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಆ ಶತಕ ವಿಶೇಷವಾದುದು. ಲಾರ್ಡ್ಸ್‌ನಲ್ಲಿ ಸಿಡಿಸಿದ ಶತಕಕ್ಕಿಂತಲೂ ಇದೇ ಶತಕ ಉತ್ತಮವೆಂದು ಈಗ ಅನಿಸುತ್ತಿದೆ. ಆದರೆ ನನಗೆ ಯಾವಾಗಲೂ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಪಂದ್ಯ ಮತ್ತು ಸರಣಿ ಗೆಲುವೇ ಪ್ರಮುಖವಾದುದು ಎಂದಿದ್ದಾರೆ.

    ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts