More

  ರಕ್ತದಾನ ಕ್ಕಿಂತ ಮಿಗಿಲಾದ ಮತ್ತೊಂದು ದಾನವಿಲ್ಲ

  ಮಡಿಕೇರಿ: ಜಗತ್ತಿನಲ್ಲಿ ವ್ಯಕ್ತಿಗತವಾಗಿ ರಕ್ತದಾನಕ್ಕಿಂತ ಮಿಗಿಲಾದ ಮತ್ತೊಂದು ದಾನವಿಲ್ಲ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಮಡಿಕೇರಿಯ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.


  ಒಬ್ಬ ವ್ಯಕ್ತಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ದಾನವೇ ರಕ್ತದಾನ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಹಾಗಾಗಿ ರಕ್ತದಾನ ಪುಣ್ಯದ ಕೆಲಸ. ರಕ್ತದಾನ ಮಾಡೋದ್ರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಲ್ಲ. ಸತ್ತ ವ್ಯಕ್ತಿಯನ್ನು ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಸಾಯುವ ವ್ಯಕ್ತಿಯನ್ನು ರಕ್ತದಾನದ ಮೂಲಕ ಬದುಕಿಸುವ ಪುಣ್ಯ ಕೆಲಸವನ್ನು ನಾವು ಮಾಡಬಹುದು. ಆದ್ದರಿಂದ ವಿಧ್ಯಾರ್ಥಿಗಳು ರಕ್ತದಾನ ದಂತಹ ಪವಿತ್ರ ಕಾರ್ಯಕ್ಕೆ ಮುಂದೆ ಬರಬೇಕು ಎಂದು ಕರೆ ನೀಡಿದರು.


  ಕೊಡಗು ವೈದ್ಯಕೀಯ ಕಾಲೇಜಿನ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದಂತೆ ರಕ್ತದ ಬೇಡಿಕೆಯು ಹೆಚ್ಚುತ್ತಿದೆ. ಒಂದು ಹನಿ ರಕ್ತವನ್ನು ಕೂಡ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರೋಗಿಗಳು ಸ್ವಯಂಪ್ರೇರಿತ ರಕ್ತದಾನಿಗಳನ್ನೇ ಅವಲಂಬಿಸಿದ್ದಾರೆ. ರಕ್ತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಯಾವುದೇ ಮೂಡನಂಬಿಕೆಗಳಿಗೆ ಕಿವಿಗೊಡದೆ ಅರ್ಹ ವ್ಯಕ್ತಿಗಳು ೩ ತಿಂಗಳಿಗೊಮ್ಮೆ ಜೀವನ ಪರ್ಯಂತ ರಕ್ತದಾನ ಮಾಡಬಹುದು. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು.


  ರಕ್ತದಾನ ಮಾಡಿದ ವ್ಯಕ್ತಿಗೆ ಹೃದ್ರೋಗ ಡಯಾಬಿಟಿಕ್, ಮುಂತಾದ ಅನೇಕ ರೋಗಗಳಿಂದ ದೂರ ಇರಬಹುದು. ಹದಿನೆಂಟು ವರ್ಷದಿಂದ ಅರವತ್ತು ವರ್ಷದವರೆಗಿನ ೪೫ ಕೆ.ಜಿ ತೂಕವನ್ನು ಮೀರಿರುವ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.


  ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೊಡಗು ಜಿಲ್ಲಾ ಎನ್.ಎಸ್.ಯು.ಐ ಘಟಕ ಬಹಳ ಉತ್ತಮ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ತಾವು ಕೂಡ ಹದಿನಾರು ಬಾರಿ ರಕ್ತದಾನ ಮಾಡಿದದ್ದು ನೆನಪುಗಳನ್ನು ಹಂಚಿಕೊಂಡರು.


  ಪದವಿ ಪೂರ್ವ ಕಾಲೇಜಿನ ಹಿರಿಯ ಶಿಕ್ಷಕಿ ಸೌಮ್ಯಲತಾ ಮಾತನಾಡಿ, ರಕ್ತದಾನ ದಿಂದ ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಹೇಳಿದರು.


  ಕೂರ್ಗ್ ಬ್ಲಡ್ ಡೊನರ್ಸ್ ಗ್ರೂಪಿನ ಮುಖ್ಯಸ್ಥರಾದ ಸಮೀರ್, ಬ್ಲಡ್ ಬಯ್ಯ, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಹ್ಯಾರಿಸ್, ಘನಶ್ರೀ, ಪ್ರಧಾನ ಕಾರ್ಯದರ್ಶಿಗಳಾದ ಪ್ರತಾಪ್, ಮಿದ್ಲಾಜ್, ಪದಾಧಿಕಾರಿಗಳಾದ ಅರ್ಜುನ್, ಕಾರ್ತಿಕ್ ಸೇರಿದಂತೆ ಪದವಿ ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿ ರಕ್ತದಾನ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts