2 ತಿಂಗಳ ಹಿಂದೆ ಇದೇ ಜಾಗದಲ್ಲಿ! ನೆನಪಿದ್ಯಾ? ಮರೆತಿದ್ದ ಆ ಘಟನೆ ನೆನಪಿಸಿದ ಹಾರ್ದಿಕ್​ ಫ್ಯಾನ್ಸ್​

ವಿಜಯವಾಣಿ - 2024-07-04T194542.869
Published on

ಮುಂಬೈ: ಕ್ರಿಕೆಟ್ ಇತಿಹಾಸದಲ್ಲಿ ಟಿ20 ವಿಶ್ವಕಪ್​ ಟ್ರೋಫಿಯನ್ನು ಐತಿಹಾಸಿಕವಾಗಿ ಗೆದ್ದ ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾಗೆ ಇದೀಗ ಜಾಗತಿಕ ಮಟ್ಟದಲ್ಲಿ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಇಂದು ಭಾರತಕ್ಕೆ ಬಂದಿಳಿದ ಭಾರತೀಯ ಆಟಗಾರರಿಗೆ ವಿಶೇಷ ಮೆಚ್ಚುಗೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರೊಟ್ಟಿಗೆ ಸಂವಾದ ನಡೆಸಿದರು. ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್​ ಚಾಂಪಿಯನ್ಸ್​ಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದ್ದು, ಕ್ರೀಡಾಂಗಣ ಸುತ್ತ ಜನಸಾಗರವೇ ತುಂಬಿದೆ.

ವಿಶ್ವಕಪ್ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಡೆಯ ಓವರ್​ ಮಾಡಿದ ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರೋಚಕ ಗೆಲುವಿಗೆ ಸಾಕ್ಷಿಯಾದ ಕ್ರಿಕೆಟ್ ಅಭಿಮಾನಿಗಳ ಮುಂದೆ ಭಾವುಕರಾದ ಪಾಂಡ್ಯ, ಈ ಗೆಲುವು ತನಗೆ ಬಹಳ ಮುಖ್ಯವಾಗಿತ್ತು ಎಂಬುದನ್ನು ಕಣ್ಣೀರಿನಲ್ಲಿ ವ್ಯಕ್ತಪಡಿಸಿದರು. ಟೂರ್ನಿ ಪೂರ ಯಶಸ್ವಿ ಆಲ್​ರೌಂಡ್​ ಪ್ರದರ್ಶನ ನೀಡಿದ ಪಾಂಡ್ಯಗೆ ಸದ್ಯ ಸನ್ಮಾನ, ಬಹುಮಾನಗಳು ಕೈಬೀಸಿ ಕರೆಯುತ್ತಿವೆ.

ಇನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಬಿಸಿಸಿಐ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಮ್ ಇಂಡಿಯಾದ ಪ್ರತಿ ಆಟಗಾರರಿಗೂ ವಿಶೇಷವಾಗಿ ಸನ್ಮಾನಿಸಲಾಗುವುದು. ಕಾರ್ಯಕ್ರಮದ ಹಿನ್ನೆಲೆ ಮೈದಾನಕ್ಕೆ ಪಾಂಡ್ಯ ಎಂಟ್ರಿ ಕೊಡುತ್ತಿದ್ದಂತೆ ಚೀರಾಡಿದ ಅಭಿಮಾನಿಗಳು, ಹಾರ್ದಿಕ್​...ಹಾರ್ದಿಕ್​ ಎಂದು ಕೂಗಿದ್ದಾರೆ. ಇದನ್ನು ಗಮನಿಸಿದ ಅನೇಕರು, ಕಳೆದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ನಾಯಕನಾಗಿದ್ದಾಗ ಇದೇ ಸ್ಟೇಡಿಯಂನಲ್ಲಿ ನಿಮಗೆ ಅವಮಾನಿಸಲಾಗಿತ್ತು. ನಾಯಿಗೆ ಹೋಲಿಸಿ ವ್ಯಂಗ್ಯವಾಡಲಾಗಿತ್ತು. ಆದ್ರೆ, ಇಂದು ಅದೇ ಜಾಗದಲ್ಲಿ ನಿಮ್ಮನ್ನು ಸಂಭ್ರಮಿಸುತ್ತಿದ್ದಾರೆ ಎಂದು ಉಪನಾಯಕನನ್ನು ಕೊಂಡಾಡಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಪರ ಮೈದಾನಕ್ಕಿಳಿದ ಪ್ರತಿ ಪಂದ್ಯದಲ್ಲಿಯೂ ನಿಮ್ಮನ್ನು ಲೇವಡಿ ಮಾಡಲಾಗುತ್ತಿತ್ತು. ಛೀಮಾರಿ ಹಾಕಲಾಗುತ್ತಿತ್ತು. ಆದರೆ, ಇಂದು ಎಲ್ಲಿ ನೋವು ಅನುಭವಿಸಿದ್ರೋ ಅಲ್ಲಿಯೇ ಖುಷಿ ಕಾಣುತ್ತಿದ್ದೀರಿ. ಯಾವ ಸ್ಥಳದಲ್ಲಿ ಅವಮಾನಕ್ಕೆ ಗುರಿಯಾಗಿದ್ರೋ, ಆ ಜಾಗದಲ್ಲಿಯೇ ಬಹುಮಾನ ಪಡೆಯುತ್ತಿದ್ದೀರಿ. ಇದಕ್ಕಿಂತ ಇನ್ನೇನು ಬೇಕು ಹಾರ್ದಿಕ್ ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net