ಪಾರ್ಕ್ ಜಾಗ ಅಕ್ರಮ ಮಂಜೂರಾತಿ ಆರೋಪ:ನಾಗತವಳ್ಳಿ ಗ್ರಾಮಸ್ಥರ ಪ್ರತಿಭಟನೆ

ಪಾರ್ಕ್ ಜಾಗ ಅಕ್ರಮ ಮಂಜೂರಾತಿ ಆರೋಪ:ನಾಗತವಳ್ಳಿ ಗ್ರಾಮಸ್ಥರ ಪ್ರತಿಭಟನೆ
Published on

ಹಾಸನ: ಪಾರ್ಕ್‌ಗೆ ಮೀಸಲಿಟ್ಟಿದ್ದ ಜಾಗವನ್ನು ಕೈಗಾರಿಕಾ ಇಲಾಖೆ ಅಧಿಕಾರಿಗಳು ಖಾಸಗಿಯವರ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ನಾಗತವಳ್ಳಿ ಗ್ರಾಮಸ್ಥರು ಗುರುವಾರ ಕೆಐಎಡಿಬಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮದ ಸುನೀಲ್ ಮಾತನಾಡಿ, ಗ್ರಾಮದ ಅನುಕೂಲಕ್ಕೆ ನಗರದ ಕೆಡಿಬಿ ಕೈಗಾರಿಕಾ ಪ್ರದೇಶದ ಸರ್ವೆ ನಂಬರ್ 54 ರಲ್ಲಿ ಎರಡು ಎಕರೆ ಜಾಗವನ್ನು ಪಾರ್ಕ್‌ಗಾಗಿ ಮೀಸಲಿಡಲಾಗಿತ್ತು. ಆದರೆ ಕೆಐಎಡಿಬಿ ಅಧಿಕಾರಿಗಳು ಖಾಸಗಿಯವರ ಜೊತೆ ಶಾಮೀಲಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ದೂರಿದರು.
ಇದೆ ವಿಚಾರವಾಗಿ ಫೆಬ್ರವರಿ 8ರಂದು ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದೇವು. ಆ ಜಾಗವನ್ನು ಪಾರ್ಕ್ ಉದ್ದೇಶಕ್ಕೆ ಬಳಸಲು ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇದೀಗ ಖಾಸಗಿಯವರಿಗೆ ಜಾಗವನ್ನು ಮಂಜೂರು ಮಾಡಿ ಈಗಾಗಲೇ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಈ ಹಿಂದೆ ಖಾಸಗಿ ವ್ಯಕ್ತಿಗಳು ಪಾರ್ಕ್ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಗ್ರಾಮಸ್ಥರು ನೀಡಿರುವ ದೂರನ್ನು ಕಡೆಗಣಿಸಿ ಇದೀಗ ಗ್ರಾಮಸ್ಥರ ಮೇಲೆಯೇ ಪ್ರಕರಣ ದಾಖಲಿಸುವ ಜೊತೆಗೆ ಪೊಲೀಸರ ಸರ್ಪಗಾವಲಿನಲ್ಲಿ ಖಾಸಗಿಯವರಿಗೆ ಕೆಲಸ ಮಾಡಲು ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಮಗೆ ಮಾತು ಕೊಟ್ಟಿರುವಂತೆ ಕೆಐಎಡಿಬಿ ಕೈಗಾರಿಕಾ ಕ್ರದೇಶದ ಸರ್ವೆ ನಂಬರ್ 54 ರಲ್ಲಿ ಪ್ರತ್ಯೇಕ ಎರಡು ಎಕರೆ ಜಾಗವನ್ನು ನಮಗೆ ಗುರುತಿಸಿ ಕೊಡಬೇಕು. ಇಲ್ಲವಾದರೆ ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶರತ್, ರವಿ, ಪುಟ್ಟಣ್ಣ, ಮಂಜ, ಜಯರಾಂ, ರೇಣುಕಾ, ಕಮಲಮ್ಮ, ಕುಮಾರಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net