

ಲಂಡನ್: ಫಾರ್ಮುಲಾ ಒನ್ ಹೊಸ ಋತುವಿನ ಆರಂಭದಲ್ಲೇ ಕರೊನಾ ಹಾವಳಿ ಶುರುವಾದ ಕಾರಣ ಇದುವರೆಗೆ ಒಂದೂ ರೇಸ್ ನಡೆದಿಲ್ಲ. ಆದರೆ ಜುಲೈ 5ರಿಂದ ಈ ವರ್ಷ ಒಟ್ಟು 8 ಗ್ರಾೃನ್ ಪ್ರಿಗಳನ್ನು ಸಂಘಟಿಸಲು ಎಫ್1 ಸಂಘಟಕರು ಮುಂದಾಗಿದ್ದಾರೆ. ಇದರ ನಡುವೆ, ಚಾಲಕನೊಬ್ಬನಿಗೆ ಕರೊನಾ ಬಂದರೆ ಅಥವಾ ತಂಡವೊಂದು ಹಿಂದೆ ಸರಿದರೂ ಎಫ್1 ರೇಸ್ ರದ್ದುಗೊಳ್ಳುವುದಿಲ್ಲ ಎಂದು ಎಫ್1 ಸಿಇಒ ಚೇಸ್ ಕ್ಯಾರಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯನ್ ಜಿಪಿಯೊಂದಿಗೆ ಎಫ್1 ರೇಸ್ ಋತು ಆರಂಭವಾಗಬೇಕಾಗಿತ್ತು. ಆದರೆ ಸಿಬ್ಬಂದಿಯೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟ ಕಾರಣ ಮೆಕ್‌ಲಾರೆನ್ ತಂಡ ಕೂಟದಿಂದ ಹಿಂದೆ ಸರಿದುದರಿಂದ ಕೊನೇಕ್ಷಣದಲ್ಲಿ ರೇಸ್ ರದ್ದುಗೊಂಡಿತ್ತು. ಆದರೆ ಮುಂದೆ ಹೀಗಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಜುಲೈ 5 ಮತ್ತು 12ರಂದು ಆಸ್ಟ್ರಿಯಾದಲ್ಲಿ ನಡೆಯುವ 2 ರೇಸ್‌ನೊಂದಿಗೆ ಎಫ್1 ಋತು ಆರಂಭವಾಗಲಿದ್ದು, ಬಳಿಕ ಹಂಗೆರಿ (ಜು.19), ಬ್ರಿಟನ್ (ಆ.2, ಆ. 9), ಸ್ಪೇನ್ (ಆ. 14), ಬೆಲ್ಜಿಯಂ (ಆ. 28) ಮತ್ತು ಇಟಲಿಯಲ್ಲಿ (ಸೆ. 6) ರೇಸ್‌ಗಳು ನಿಗದಿಯಾಗಿವೆ.
‘ತಂಡವೊಂದಕ್ಕೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ ರೇಸ್ ಸ್ಥಗಿತಗೊಳ್ಳುವುದಿಲ್ಲ. ಕರೊನಾ ಸೋಂಕಿನಿಂದ ಇನ್ನು ರೇಸ್ ನಿಲ್ಲುವುದಿಲ್ಲ. ಚಾಲಕನೊಬ್ಬನಿಗೆ ಕರೊನಾ ದೃಢಪಟ್ಟರೆ, ಮೀಸಲು ಚಾಲಕ ಕಣಕ್ಕಿಳಿಯಬಹುದು’ ಎಂದು ಕ್ಯಾರಿ ಎಫ್1 ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. ಮೊದಲ ಪ್ರತಿ ತಂಡದ ಸದಸ್ಯರನ್ನೂ ಕರೊನಾ ಪರೀಕ್ಷೆಗೆ ಒಳಪಡಿಸಲಾಗುವುದು. ಬಳಿಕ ಪ್ರತಿ 2 ದಿನಕ್ಕೊಮ್ಮೆ ಪರೀಕ್ಷೆ ನಡೆಯಲಿದೆ. ನಮ್ಮ ಕ್ರೀಡೆಯಲ್ಲಿ ವ್ಯಕ್ತಿಗಳ ನಡುವೆ 2 ಮೀಟರ್ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದು. ಪಿಟ್‌ಗೆ ಮರಳಿದ ಕಾರಿನ 4 ಚಕ್ರಗಳನ್ನು ಬದಲಾಯಿಸುವಾಗ ಅಂತರ ಕಾಯ್ದುಕೊಂಡು ಕೆಲಸ ಮಾಡಲಾಗದು. ಈ ಅಪಾಯಗಳನ್ನು ಎದುರಿಸಿ ನಿಲ್ಲುವುದೇ ನಮಗಿರುವ ಮಾರ್ಗ ಎಂದು ಚೇಸ್ ಕ್ಯಾರಿ ವಿವರಿಸಿದ್ದಾರೆ. ಮೂಲ ವೇಳಾಪಟ್ಟಿಯ ಪ್ರಕಾರ ಈ ವರ್ಷ ಒಟ್ಟು 22 ಎಫ್1 ರೇಸ್‌ಗಳು ನಡೆಯಬೇಕಾಗಿದ್ದವು.