

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಗೆ ಬೈಕ್, ಕಾರ್ ಕ್ರೇಜ್ ಹೊಸದೆನಲ್ಲ. ಇವುಗಳ ಶೇಖರಣೆಗಾಗಿಯೇ ಧೋನಿ ತಮ್ಮ ಮನೆಯಲ್ಲಿ ಪ್ರತ್ಯೇಕ ಗ್ಯಾರೇಜ್ ನಿರ್ಮಿಸಿಕೊಂಡಿದ್ದಾರೆ. ರಾಂಚಿಯಲ್ಲಿರುವ 7 ಏಕರೆ ಫಾರ್ಮ್‌ಹೌಸ್‌ನಲ್ಲಿ ಓಡಾಡುವ ಸಲುವಾಗಿಯೇ ಧೋನಿ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್, ಧೋನಿ ಫಾರ್ಮ್ ಹೌಸ್‌ನಲ್ಲಿ ಟ್ರ್ಯಾಕ್ಟರ್‌ನಲ್ಲಿ ಓಡಿಸುತ್ತಿದ್ದ ವಿಡಿಯೋ ಹಂಚಿಕೊಂಡಿದೆ. ವಿಡಿಯೋಗೆ ಇಳೆಯರಾಜ ಹಾಡಿರುವ ತಮಿಳು ಸಿನಿಮಾ ಗೀತೆ ಮೌನ ರಾಗಂ ಹಾಡನ್ನು ಸಂಯೋಜಿಸಲಾಗಿದೆ. ವಿಡಿಯೋ ಪ್ರಕಟಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿಂದಲೂ ಫಾರ್ಮ್ ಹೌಸ್‌ನಲ್ಲಿ ಲಾಕ್ ಆಗಿರುವ ಧೋನಿ, ಈ ವೇಳೆ ಹೊರಗೆ ಕಾಣಿಸಿಕೊಂಡಿದ್ದೇ ಕಡಿಮೆ. ಪತ್ನಿ ಸಾಕ್ಷಿ ಒಂದೆರಡು ಭಾರಿ ಫೋಟೋ ಪ್ರಕಟಿಸಿದ್ದು ಬಿಟ್ಟರೆ, ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಧೋನಿ ಎಲ್ಲೂ ಕಾಣಿಸಿಕೊಂಡಿಲ್ಲ. ಫಾರ್ಮ್‌ಹೌಸ್ ಗ್ಯಾರೇಜ್‌ನಲ್ಲಿ ಹಲವು ಬಗೆಯ ಬೈಕ್‌ಗಳನ್ನು ಧೋನಿ ಹೊಂದಿದ್ದಾರೆ. ಯಮಹಾ ಆರ್‌ಡಿ350, ಡುಕ್ಯಾಟಿ1098, ಕವಾಸಕಿ ನಿಂಜಾ ಝೆಡ್‌ಎಕ್ಸ್-14ಆರ್, ಕಂಫೆಡರೇಷ್ ಎಕ್ಸ್132, ಹೆಲ್‌ಕ್ಯಾಟ್‌ನಂತ ದುಬಾರಿ ಬೈಕ್‌ಗಳು ಧೋನಿ ಗ್ಯಾರೇಜ್‌ನಲ್ಲಿವೆ. ಎಸ್‌ವುವಿ, ಹಮ್ಮರ್‌ನಂಥ ಕಾರುಗಳಿವೆ. ಇದೀಗ ಧೋನಿ ಗ್ಯಾರೇಜ್‌ಗೆ ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ನೂತನ ಸ್ವರಾಜ್ ಟ್ರ್ಯಾಕ್ಟರ್ ಆಗಮನವಾಗಿದೆ. ಸಹಾಯಕನ ನೆರವಿಂದ ಧೋನಿ ಒಂದು ಸುತ್ತು ಫಾರ್ಮ್‌ಹೌಸ್ ಬಳಸಿದ್ದಾರೆ. ಮಹೀಂದ್ರ ಸಂಸ್ಥೆಯೂ ಧೋನಿ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಸ್ವರಾಜ್ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದೆ.
ಧೋನಿಗೆ ಅರೇಂಜ್ ಬಣ್ಣದ ಲಾಂಗ್ ಹೇರ್ ಚೆನ್ನಾಗಿ ಕಾಣುವುದಿಲ್ಲ ಎಂದು ಇತ್ತೀಚೆಗಷ್ಟೇ ಧೋನಿ ಪತ್ನಿ ಸಾಕ್ಷಿ ಧೋನಿ ಸಿಎಸ್‌ಕೆಯ ರೂಪಾ ರಮಣಿ ಜತೆಗಿನ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಹೇಳಿಕೊಂಡಿದ್ದರು. ಎಂಎಸ್ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಮುನ್ನಡೆಸುತ್ತಿದ್ದಾರೆ. ಕರೊನಾ ವೈರಸ್ ಭೀತಿಯಿಂದಾಗಿ 13ನೇ ಆವೃತ್ತಿಯೂ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ.