

ಬೆಂಗಳೂರು: ಅವರುಗಳು ಪ್ರತಿಭಾನ್ವಿತ ಕ್ರೀಡಾಪಟುಗಳು. ಅಂದು ದೇಶದ ಪರ ಮೈದಾನದಲ್ಲಿ ಹೋರಾಡಿದವರು. ಇಂದು ಕೋವಿಡ್-19ರ ವಿರುದ್ಧ ರಸ್ತೆ ಬೀದಿಗಳಲ್ಲಿ ನಿಂತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ. ಪೊಲೀಸ್ ಹಾಗೂ ರೈಲ್ವೆ ಇಲಾಖೆ ಉನ್ನತ ದರ್ಜೆಯಲ್ಲಿದ್ದರೂ ಲಾಕ್‌ಡೌನ್ ವೇಳೆ ರಸ್ತೆ ಬದಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ. 2007 ಚೊಚ್ಚಲ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಜೋಗಿಂದರ್ ಶರ್ಮ, ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ ರಾಜ್‌ಪಾಲ್ ಸಿಂಗ್, ಬಾಕ್ಸರ್‌ಗಳಾದ ಅಖಿಲ್ ಕುಮಾರ್, ದಿವಾಕರ್, ಕಬಡ್ಡಿ ಆಟಗಾರ ಅಜಯ್ ಠಾಕೂರ್ ಸೇರಿದಂತೆ ಅನೇಕ ಮಾಜಿ ಕ್ರೀಡಾಪಟುಗಳು ಕೋವಿಡ್-19ರ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ.
ಇದನ್ನೂ ಓದಿ: ಈಜುಪಟುಗಳ ಒಲಿಂಪಿಕ್ಸ್ ಕನಸಿಗೆ ಹಿನ್ನಡೆ
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಹೀರೋ ಜೋಗಿಂದರ್ ಶರ್ಮ. ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ರನ್‌ಗಳಿಂದ ಜಯ ದಾಖಲಿಸುವಲ್ಲಿ ಜೋಗಿಂದರ್ ಪ್ರಮುಖ ಪಾತ್ರವಹಿಸಿದ್ದರು. ಸದ್ಯ ಹರಿಯಾಣದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ (ಡಿಎಸ್‌ಪಿ) ಜೋಗಿಂದರ್ ಶರ್ಮ, ಲಾಕ್‌ಡೌನ್ ನಿಯಮ ಉಲ್ಲಂಸಿದವರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಜೋಗಿಂದರ್ ಕಾರ್ಯವನ್ನು ಬಿಸಿಸಿಐ ಟ್ವೀಟ್ ಮೂಲಕ ಅಭಿನಂದಿಸಿತ್ತು.
ಇದನ್ನೂ ಓದಿ :ಸಾಕ್ಷಿಗೆ ಇಷ್ಟವಿಲ್ಲದ ಧೋನಿ ಹೇರ್ಸ್ಟೈಲ್….!
ಜೋಗಿಂದರ್ ಶರ್ಮ ಮಾದರಿಯಲ್ಲಿಯೇ ಪೊಲೀಸ್ ಹಾಗೂ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಕ್ರೀಡಾಪಟುಗಳು ಕೂಡ ಕೋವಿಡ್-19ರ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಪಂಜಾಬ್‌ನಲ್ಲಿ ಡಿಎಸ್‌ಪಿಯಾಗಿರುವ ಭಾರತ ತಂಡದ ಮಾಜಿ ನಾಯಕ ರಾಜ್‌ಪಾಲ್ ಸಿಂಗ್, ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಇಲಾಖೆಯಲ್ಲಿರುವ ಬಾಕ್ಸರ್ ದಿವಾಕರ್ ಪ್ರಸಾದ್, ಹಿಮಾಚಲ ಪ್ರದೇಶದಲ್ಲಿ ಡಿಎಸ್‌ಪಿಯಾಗಿರುವ ಅಜಯ್ ಠಾಕೂರ್ ಕೂಡ ದಿನಗಟ್ಟಲೇ ಲಾಕ್‌ಡೌನ್ ವೇಳೆ ಕಾರ್ಯನಿರ್ವಹಿಸಿದ್ದರು. 2006ರ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ಬಾಕ್ಸರ್ ಅಖಿಲ್ ಕುಮಾರ್, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಸಿಪಿಯಾಗಿರುವ ಗಗನ್ ಅಜಿತ್ ಸಿಂಗ್, ತಮಿಳುನಾಡಿನ ಚೆನ್ನೈನಲ್ಲಿ ಭಾರತ ಮಹಿಳಾ ಫುಟ್‌ಬಾಲ್ ತಂಡದ ಮಿಡ್‌ಫೀಲ್ಡರ್ ಇಂದುಮತಿ ಕಾಥಿರೆಸನ್ ಕೂಡ ಕೋವಿಡ್-19ರ ವಿರುದ್ಧ ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.