More

    ಈಜುಪಟುಗಳ ಒಲಿಂಪಿಕ್ಸ್ ಕನಸಿಗೆ ಹಿನ್ನಡೆ

    ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ಸ್ತಬ್ಧಗೊಂಡಿತ್ತು. ಲಾಕ್​ಡೌನ್ 4.0ರಲ್ಲಿ ದೈಹಿಕ ಸಂಪರ್ಕ ಕ್ರೀಡೆ ಹೊರತುಪಡಿಸಿ ಉಳಿದ ಕ್ರೀಡೆಗಳಿಗೆ ಖಾಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಅಥವಾ ತರಬೇತಿಗೆ ಅನುಮತಿ ನೀಡಲಾಗಿದೆ. ಆದರೆ, ಈಜುಕೊಳ ತೆರೆಯಲು ಲಾಕ್​ಡೌನ್ 5.0ರಲ್ಲೂ ಅನುಮತಿ ನೀಡಲಾಗಿಲ್ಲ. ಇದರಿಂದ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿರುವ ಭಾರತದ ಸ್ಟಾರ್ ಈಜುಪಟುಗಳ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕರ್ನಾಟಕದ ಯುವ ಈಜುಪಟು ಶ್ರೀಹರಿ ನಟರಾಜ್, ಸ್ಟಾರ್ ಈಜುಪಟುಗಳಾದ ಸಾಜನ್ ಪ್ರಕಾಶ್, ವೀರ್​ಧವಳ್ ಖಾಡೆ, ಆರ್ಯನ್ ಮಖಾಜ, ಕುಶಾಗ್ರ ರಾವತ್ ಹಾಗೂ ನೀಲ್ ರಾಯ್ ಟೋಕಿಯೊ ಒಲಿಂಪಿಕ್ಸ್​ಗೆ ಬಿ ದರ್ಜೆಯ ಅರ್ಹತೆ ಪಡೆದುಕೊಂಡಿದ್ದರೂ, ಒಲಿಂಪಿಕ್ಸ್ ಟಿಕೆಟ್ ಖಾತ್ರಿ ಪಡಿಸಿಕೊಳ್ಳುವ ಎ ದರ್ಜೆಯ ಅರ್ಹತೆಗಾಗಿ ಅಭ್ಯಾಸವಿಲ್ಲದೆ ಪರದಾಡುವಂತಾಗಿದೆ.

    ಕುತ್ತು ತಂದ ಸರ್ಕಾರದ ಮಾರ್ಗಸೂಚಿ: ಕೇಂದ್ರ ಸರ್ಕಾರ ಕೆಲವೊಂದು ಮಾರ್ಗಸೂಚಿಗಳೊಂದಿಗೆ ಹಂತ ಹಂತವಾಗಿ ಲಾಕ್​ಡೌನ್ ಸಡಿಲ ಗೊಳಿಸುತ್ತಾ ಬಂದಿದೆ. ಆದರೆ, ಈಜುಕೊಳಕ್ಕಿಳಿಯಲು ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈಜುಕೊಳಗಳ ತೆರವಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡುವಂತಿಲ್ಲ. ಅನ್​ಲಾಕ್​ನ 3 ಹಂತಗಳಲ್ಲೂ ಈಜುಕೊಳ ತೆರೆಯುವುದು ಕೊನೆಯ ಹಂತದಲ್ಲಿದೆ. ಅಂದರೆ ಈಜುಕೊಳ ತೆರೆಯಲು ಕನಿಷ್ಠ ಆಗಸ್ಟ್​ವರೆಗೂ ಕಾಯಬೇಕು ಎಂಬ ಸಂದೇಶ ರವಾನೆಯಾಗಿದೆ. ಈಗಾಗಲೆ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳಲು ಈಜುಪಟುಗಳಿಗೆ 2021ರ ಜೂನ್ 29ರವರೆಗೂ ಅವಕಾಶವಿದೆ. ಆದರೆ ಇನ್ನೂ ಕೆಲ ತಿಂಗಳು ಈಜುಕೊಳಕ್ಕೆ ಇಳಿಯದಿದ್ದರೆ ಅಭ್ಯಾಸದ ಕೊರತೆಯಿಂದಾಗಿ ಈಜುಪಟುಗಳ ಒಲಿಂಪಿಕ್ಸ್ ಆಸೆ ಬತ್ತಿಹೋಗುವುದು ನಿಶ್ಚಿತ. ಅಂತಾರಾಷ್ಟ್ರೀಯ ಈಜು ಒಕ್ಕೂಟದ ನಿಯಮದ ಅನ್ವಯ ಎ ದರ್ಜೆ ಅರ್ಹತೆ ಗಿಟ್ಟಿಸಿಕೊಂಡರೆ ಒಲಿಂಪಿಕ್ಸ್ ಟಿಕೆಟ್ ಖಚಿತ. ಬಿ ದರ್ಜೆ ಅರ್ಹತೆ ಪಡೆದವರಿಗೂ ಒಲಿಂಪಿಕ್ಸ್ ಟಿಕೆಟ್ ಸಿಗಬೇಕಾದರೆ ಅದೃಷ್ಟ ಇರಬೇಕಾಗುತ್ತದೆ. ಯಾಕೆಂದರೆ ಆಯಾ ಈಜುಸ್ಪರ್ಧೆಯ ವಿಭಾಗದಲ್ಲಿ ಎ ದರ್ಜೆ ಅರ್ಹತೆ ಪಡೆದವರಿಂದ ಸ್ಥಾನಗಳು ಭರ್ತಿಯಾಗದಿದ್ದರೆ ಮಾತ್ರ ಆಯ್ದ ಬಿ ದರ್ಜೆ ಅರ್ಹತೆ ಪಡೆದವರಿಗೆ ಅದೃಷ್ಟ ಒಲಿಯುತ್ತದೆ. ಹೀಗಾಗಿ ಎ ದರ್ಜೆ ಅರ್ಹತೆಗಾಗಿ ಈಜುಪಟುಗಳು ಒಲವು ಹೊಂದಿದ್ದಾರೆ. ಈಜುಕೊಳವನ್ನು ಎಲ್ಲರಿಗೂ ಮುಕ್ತಗೊಳಿಸದೆ, ಒಲಿಂಪಿಕ್ಸ್ ಅರ್ಹತೆ ಅವಕಾಶ ಹೊಂದಿರುವ ಪ್ರಮುಖ ಈಜುಪಟುಗಳಿಗಾದರೂ ತೆರೆದು ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಭಾರತೀಯ ಈಜು ಸಂಸ್ಥೆ ಪದೆಪದೇ ಒತ್ತಾಯಿಸುತ್ತಿದ್ದರೂ ಸರ್ಕಾರ ಅಥವಾ ಕ್ರೀಡಾ ಸಚಿವಾಲಯ ಇದಕ್ಕೆ ಸೂಕ್ತ ಸ್ಪಂದನೆ ನೀಡದಿರುವುದು ವಿಪರ್ಯಾಸ.

    ಇದನ್ನೂ ಓದಿ  ಬೆಳ್ಳಿಯಲ್ಲಿ ತಯಾರಾಯ್ತು ಅತಿ ಸಣ್ಣ ವಿಜಯ ರಥ!

    ಸಂಕಷ್ಟದಲ್ಲಿ ಶ್ರೀಹರಿ ನಟರಾಜ್

    ಬೆಂಗಳೂರಿನ 18 ವರ್ಷದ ಶ್ರೀಹರಿ ನಟರಾಜ್, 100 ಮೀಟರ್ ಬ್ಯಾಕ್​ಸ್ಟ್ರೋಕ್ ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ. ಈ ವಿಭಾಗದಲ್ಲಿ 54.69 ಸೆಕೆಂಡ್​ಗಳ ವೈಯಕ್ತಿಕ ಶ್ರೇಷ್ಠ ಸಾಧನೆ ಹೊಂದಿರುವ ಮತ್ತೀಕೆರೆಯ ಬೆಂಗಳೂರು ಈಜು ಕೇಂದ್ರದ ಶ್ರೀಹರಿ, ಎ ದರ್ಜೆ ಅರ್ಹತೆಗಾಗಿ 53.85 ಸೆಕೆಂಡ್​ಗಳಲ್ಲಿ ಈ ದೂರ ಕ್ರಮಿಸಬೇಕಿದೆ. ಅವರು ಈಗಾಗಲೆ ಬಿ ದರ್ಜೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ, ಆರ್ಯನ್ ಮಖಾಜ, ಕುಶಾಗ್ರ ರಾವತ್ ಇಬ್ಬರೂ 400ಮೀ ಹಾಗೂ 1500ಮೀ ಫ್ರೀಸ್ಟೈಲ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನವದೆಹಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಈಜುಕೊಳವನ್ನೇ ಅಭ್ಯಾಸಕ್ಕೆ ಅವಲಂಭಿಸಿದ್ದಾರೆ.

    ನೀಲ್ ರಾಯ್ ಈಜು ತರಬೇತಿ ಆರಂಭ

    ಯುಎಸ್​ಎನ ಸ್ಟಾ್ಯನ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿರುವ 18 ವರ್ಷ ನೀಲ್ ರಾಯ್, ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳೊಂದಿಗೆ ಅಭ್ಯಾಸ ಆರಂಭಿಸಿದ್ದಾರಂತೆ. ಈಜುಕೊಳಕ್ಕೆ ವೃತ್ತಿಪರ ಈಜುಪಟುಗಳು ಹೊರತುಪಡಿಸಿ ಇತರರಿಗೆ ಅವಕಾಶವಿಲ್ಲ. ನಿಗದಿತ ಸಂಖ್ಯೆಯಲ್ಲಿ ಈಜುಪಟುಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ನೀಲ್ ರಾಯ್ ಹೇಳಿದ್ದಾರೆ. 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ನೀಲ್ ಅಭ್ಯಾಸ ಆರಂಭಿಸಿದ್ದಾರೆ.

    ಸರ್ಕಾರದ ನಿಯಮ ಉಲ್ಲಂಘಿಸಲು ಸಾಧ್ಯವಿಲ್ಲ. ಈ ಸಮಯದಲ್ಲಿ ಎಲ್ಲರ ಸುರಕ್ಷತೆ ಮುಖ್ಯ, ಸರ್ಕಾರ ಅನುಮತಿ ನೀಡುವವರೆಗೂ ಕಾಯಬೇಕಾಗುತ್ತದೆ. ಅನುಮತಿ ಸಿಕ್ಕ ಬಳಿಕವೇ ಅಭ್ಯಾಸ ಆರಂಭಿಸಲಾಗುವುದು.

    | ಶ್ರೀಹರಿ ನಟರಾಜ್, ರಾಜ್ಯದ ಈಜುಪಟು

    ಎಲೈಟ್ ಈಜುಪಟುಗಳ ಅಭ್ಯಾಸಕ್ಕಾಗಿ ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅವಕಾಶ ಮಾಡಿಕೊಡಬೇಕು. ಪ್ರಕಾಶ್ ಸಾಜನ್ ಹಾಗೂ ನೀಲ್ ರಾಯ್ ವಿದೇಶಗಳಲ್ಲಿ ಇದ್ದರೆ, ಇತರ ಈಜುಪಟುಗಳು ಭಾರತದಲ್ಲೇ ಇದ್ದಾರೆ. ತರಬೇತಿ ಸಂಪೂರ್ಣ ಸ್ಥಗಿತಗೊಂಡಿದೆ. ಪೂರ್ಣಪ್ರಮಾಣದಲ್ಲಿ ಜೂನ್ ತಿಂಗಳಲ್ಲೇ ಈಜು ಪುನರಾರಂಭ ಗೊಂಡರೆ ಫಿಟ್ನೆಸ್ ಸಾಧಿಸಲು 3 ರಿಂದ 4 ತಿಂಗಳ ಅಗತ್ಯವಿದೆ. ಸಹಜ ಸ್ಥಿತಿಗೆ ಮರಳಲು 6ರಿಂದ 8 ತಿಂಗಳ ಅವಶ್ಯಕತೆಯಿದೆ.

    | ನಿಹಾರ್ ಅಮೀನ್ ಈಜು ಕೋಚ್

    80ರ ಇಳಿವಯಸ್ಸಿನಲ್ಲೂ ಈ ಅಜ್ಜ ಹೀರೋ ಆಗಿದ್ದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts