ಟೀಮ್​ ಇಂಡಿಯಾ ಮಾಜಿ ಕೋಚ್​ ಮನೆಯಲ್ಲಿ 1 ಕೋಟಿ ರೂ. ನಗದು ಪತ್ತೆ

Tushar Arothe
Published on

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್​ ತಂಡ ಮಾಜಿ ಕೋಚ್​ ತುಷಾರ್ ಅರೋಥೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಷಾರ್​ ಅವರ ಮನೆಯಲ್ಲಿ 1 ಕೋಟಿ ರೂ. ಹಣ ಪತ್ತೆಯಾದ ಹಿನ್ನಲೆಯಲ್ಲಿ ಅವರನ್ನು ವಡೋದರಾ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವಡೋದರದ ಪತ್ಪರ್‌ಗಂಜ್ ಪ್ರದೇಶದಲ್ಲಿರುವ ತುಷಾರ ಅವರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಪೆಷಲ್​ ಆಪರೇಷನ್​ ಗ್ರೂಪ್​ (SOG) ದಾಳಿ ನಡೆಸಿತ್ತು. ದಾಳಿಯ ವೇಳೆ ಹಣದ ಮೂಲ ಸೇರಿದಂತೆ ಸ್ಪಷ್ಟ ಉತ್ತರ ಸಿಗದ ಹಿನ್ನಲೆಯಲ್ಲಿ ತುಷಾರ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ವಡೋದರಾ ಪೊಲೀಸರು, ತುಷಾರ್​ ಅವರ ಮನೆ ಮೇಲೆ ದಾಳಿ ಮಾಡಿದಾಗ ಬೂದು ಬಣ್ಣದ ಬ್ಯಾಗ್​ ಒಂದರಲ್ಲಿ 1.01 ಕೋಟಿ ರೂ, ಹಣ ಪತ್ತೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅವರು ಯಾವುದಕ್ಕೂ ಸ್ಪಷ್ಟ ಉತ್ತರ ನೀಡಿಲ್ಲ. ಈ ಹಿನ್ನಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್​ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2019ರಲ್ಲಿ ಐಪಿಎಲ್​ ನಡೆಯುತ್ತಿದ್ದ ವೇಳೆ ಬೆಟ್ಟಿಂಗ್​ ನಡೆಸಿದ ಆರೋಪದ ಮೇಲೆ ಗುಜರಾತ್​ ಪೊಲೀಸರು ತುಷಾರ್​ ಅರೋಥೆ ಸೇರಿದಂತೆ 19 ಜನರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನಲೆ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದರು.

ಈ ಹಿಂದೆ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ತುಷಾರ್ ಅರೋಥೆ 2018ರಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮುನ್ನ 2017 ರಲ್ಲಿ ತುಷಾರ್ ಅವರ ಕೋಚಿಂಗ್ ಸಾರಥ್ಯದಲ್ಲಿ ಭಾರತ ಮಹಿಳಾ ತಂಡ ಐಸಿಸಿ ವಿಶ್ವಕಪ್‌ನಲ್ಲಿ ಫೈನಲ್​ಗೆ ಪ್ರವೇಶಿಸಿತ್ತು. ಆದರೆ ಇದಾದ ಬಳಿಕ ತುಷಾರ್ ಅರೋಥೆ ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net