ವಯಸ್ಸಾದ್ರೂ ಕಡಿಮೆಯಾಗಿಲ್ಲ ಕೋಪ: ಅದೇ ಲುಕ್​... ಅದೇ ಖದರ್​, ಟಿನೋ ಬೆಸ್ಟ್​ಗೆ ಯುವಿ ವಾರ್ನಿಂಗ್​​! Yuvraj Singh

Yuvraj Singh
Published on

Yuvraj Singh : ವಯಸ್ಸಾದರು ಕೂಡ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಕೋಪ ಮಾತ್ರ ಕಡಿಮೆಯಾಗಿಲ್ಲ. ಟೀಮ್​ ಇಂಡಿಯಾ ಪರ ಆಡುವಾಗ ಎಷ್ಟು ಆಕ್ರಮಣಕಾರಿಯಾಗಿದ್ದರೋ ಈಗಲೂ ಅದೇ ಆಕ್ರಮಣಕಾರಿ ಸ್ವಭಾವ ಇದೆ. ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್ (ಮಾಜಿ ಕ್ರಿಕೆಟಿಗರನ್ನು ಒಳಗೊಂಡ ಪಂದ್ಯಾವಳಿ) ಫೈನಲ್‌ನಲ್ಲಿ ಯುವರಾಜ್ ತಮ್ಮ ಹಳೆಯ ದಿನಗಳನ್ನು ನೆನಪಿಸಿದ್ದಾರೆ.

ಅಷ್ಟಕ್ಕೂ ನಡೆದದ್ದೇನೆಂದರೆ, ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ ಮೊದಲ ಆವೃತ್ತಿಯ ಫೈನಲ್‌ನಲ್ಲಿ ಇಂಡಿಯನ್ ಮಾಸ್ಟರ್ಸ್ ಮತ್ತು ವೆಸ್ಟ್ ಇಂಡೀಸ್ ಮಾಸ್ಟರ್ಸ್ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತ ಜಯಶಾಲಿಯಾಗಿ ಹೊರಹೊಮ್ಮಿ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ಈ ಪಂದ್ಯದಲ್ಲಿ ವಿನಯ್ ಕುಮಾರ್ (3-0-26-3) ಮತ್ತು ಶಹಬಾಜ್ ನದೀಮ್ (4-1-12-2) ಉತ್ತಮವಾಗಿ ಬೌಲಿಂಗ್ ಮಾಡಿದರು. ಬಳಿಕ ಅಂಬಟಿ ರಾಯುಡು (74 ರನ್, 50 ಎಸೆತ,​ 9 ಬೌಂಡರಿಗಳು, 3 ಸಿಕ್ಸರ್‌ಗಳು) ಬ್ಯಾಟಿಂಗ್‌ನಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.

ಈ ಪಂದ್ಯದ ಮಧ್ಯದಲ್ಲಿ ಒಂದು ದುರಾದೃಷ್ಟಕರ ಘಟನೆ ನಡೆಯಿತು. ಅದೇನೆಂದರೆ, ವೆಸ್ಟ್ ಇಂಡೀಸ್ ಆಟಗಾರ ಟಿನೋ ಬೆಸ್ಟ್ ಮತ್ತು ಭಾರತದ ಆಟಗಾರ ಯುವರಾಜ್ ಸಿಂಗ್ ಜಗಳವಾಡಿದರು. ವೆಸ್ಟ್ ಇಂಡೀಸ್ ನೀಡಿದ ಗುರಿಯನ್ನು ಇಂಡಿಯಾ ಮಾಸ್ಟರ್ಸ್ ಬೆನ್ನಟ್ಟುತ್ತಿದ್ದಾಗ (14 ನೇ ಓವರ್‌ನ ಮೊದಲ ಎಸೆತದ ನಂತರ) ಯುವರಾಜ್ ತಮ್ಮ ಸಹಜ ಶೈಲಿಯಲ್ಲಿ ಟಿನೋ ಬೆಸ್ಟ್ ಬಗ್ಗೆ ವ್ಯಂಗ್ಯವಾಡಿದರು. ಈ ವೇಳೆ ಬೆಸ್ಟ್ ಕೂಡ ಯುವರಾಜ್‌ಗೆ ತಮ್ಮದೇ ರೀತಿಯಲ್ಲಿ ಉತ್ತರಿಸಿದರು. ಇದು ದೊಡ್ಡ ಜಗಳಕ್ಕೆ ಕಾರಣವಾಯಿತು.

ಇಬ್ಬರ ನಡುವೆ ಸ್ವಲ್ಪ ಹೊತ್ತು ವಾಗ್ವಾದ ನಡೆಯಿತು. ಅಂಪೈರ್ ಬಿಲ್ಲಿ ಬೌಡೆನ್, ಕ್ರೀಸ್‌ನಲ್ಲಿದ್ದ ಅಂಬಟಿ ರಾಯುಡು ಮತ್ತು ವೆಸ್ಟ್ ಇಂಡೀಸ್ ನಾಯಕ ಬ್ರಿಯಾನ್ ಲಾರಾ ಅವರು ಜಗಳ ನಿಲ್ಲಿಸಲು ಹೇಳಿದ ನಂತರ ಇಬ್ಬರೂ ಹಿಂದೆ ಸರಿದರು. ಅದಾದ ನಂತರ, ಆಟ ಸರಾಗವಾಗಿ ನಡೆಯಿತು ಮತ್ತು ಭಾರತ ಜಯಶಾಲಿಯಾಯಿತು. ಯುವಿ-ಬೆಸ್ಟ್ ಘರ್ಷಣೆಗೂ ಮೊದಲು, ಆಶ್ಲೇ ನರ್ಸ್ ಬೌಲಿಂಗ್‌ನಲ್ಲಿ ರಾಯುಡು ಬೃಹತ್ ಸಿಕ್ಸರ್ ಬಾರಿಸಿದರು. ಬೆಸ್ಟ್ ಎಸೆದ ಓವರ್‌ನಲ್ಲಿ ರಾಯುಡು ಮತ್ತು ಯುವಿ 12 ರನ್‌ಗಳನ್ನು ಚಚ್ಚಿದರು.

ಅಂದಹಾಗೆ ಯುವಿಗೆ ಇಂತಹ ಜಗಳಗಳು ಹೊಸದೇನಲ್ಲ. ಟೀಮ್​ ಇಂಡಿಯಾದಲ್ಲಿ ಆಡುತ್ತಿದ್ದಂತಹ ದಿನಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ. 2007ರ ಟಿ20 ವಿಶ್ವಕಪ್ ಸಮಯದಲ್ಲಿ ಇಂಗ್ಲೆಂಡ್ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಜೊತೆಗಿನ ಜಗಳವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಾರೆ.

ಇನ್ನು ಮಾಜಿ ಆಟಗಾರರಿಗಾಗಿ ಆಯೋಜಿಸಲಾದ ಪಂದ್ಯಾವಳಿ ಶಾಂತ ರೀತಿಯಲ್ಲಿ ನಡೆಯಬೇಕಿತ್ತು ಮತ್ತು ಜಗಳದ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಿದವರು ಮೊದಲು ಜಗಳಕ್ಕೆ ಮುಂದಾಗಿದ್ದೇ ಯುವಿ ಎಂದು ಹೇಳಿದ್ದಾರೆ. ಸರಾಗವಾಗಿ ನಡೆಯುತ್ತಿದ್ದ ಮಾಸ್ಟರ್ಸ್ ಲೀಗ್, ಫೈನಲ್‌ನಲ್ಲಿ ಯುವಿ ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಯುವಿಯ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನು ಈ ಪಂದ್ಯಾವಳಿಯಲ್ಲಿ (ಆಸ್ಟ್ರೇಲಿಯಾ ವಿರುದ್ಧ) ಕೇವಲ ಒಂದು ಪಂದ್ಯವನ್ನು ಸೋತಿದ್ದ ಭಾರತ, ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸಚಿನ್ ತೆಂಡೂಲ್ಕರ್ ನೇತೃತ್ವದಲ್ಲಿ ಭಾರತ ಈ ಪಂದ್ಯಾವಳಿಯಲ್ಲಿ ಅದ್ಭುತ ಜಯಗಳಿಸಿತು. ಭಾರತೀಯ ಮಾಸ್ಟರ್ಸ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಅಂಬಟಿ ರಾಯುಡು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಿತು. ಭಾರತವು ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ಬೆನ್ನಟ್ಟಿತು. ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಡ್ವೇನ್ ಸ್ಮಿತ್ (45) ಮತ್ತು ಲೆಂಡ್ಲ್ ಸಿಮನ್ಸ್ (57) ಮಾತ್ರ ಗಮನಾರ್ಹ ಆಟ ಪ್ರದರ್ಶಿಸಿದರು. ದಂತಕಥೆ ಲಾರಾ (6) ನಿರಾಶೆಗೊಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net